
ಸುಳ್ಯ:ಸುಳ್ಯದ ಕಂದಡ್ಕ ಭಾಗದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ಕೃಷಿ ಹಾನಿ ಮಾಡಿದೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ೬ ಆನೆಗಳ ಹಿಂಡು ಕಂದಡ್ಕ, ನೀರಬಿದಿರೆ, ಕೊಯಿಕುಳಿ, ಕುಂಬೆತ್ತಿಬನ ಮತ್ತಿತರ ಭಾಗಗಳಲ್ಲಿ ಕೃಷಿ ಹಾನಿ ಮಾಡಿದೆ. ಕಂದಡ್ಕದ ಹೇಮಂತ ಕುಮಾರ್, ಅಜಯ್ ಕೃಷ್ಣ, ಯಶವಂತ ಕುಡೆಕಲ್ಲು, ಆನಂದ ನಾಯಕ್ ಮೊದಲಾದವರ ತೋಟಗಳಿಗೆ ನುಗ್ಗಿ ತೆಂಗಿನಮರ, ಬಾಳೆಗಿಡ ಹಾಗೂ ಅಡಿಕೆ ಗಿಡಗಳನ್ನು ಧ್ವಂಸ ಮಾಡಿ ಅಪಾರ ಹಾನಿ ಮಾಡಿವೆ. ಉಬರಡ್ಕ ಭಾಗದಲ್ಲಿ ಹಾನಿ ಮಾಡಿದ್ದ ಮರಿ ಸೇರಿ ಇರುವ ಆನೆಗಳ ಹಿಂಡು ಇದೀಗ ಕಂದಡ್ಕ ಭಾಗದಲ್ಲಿ ದಾಳಿ ಮಾಡಿದೆ. ಆನೆಗಳನ್ನು ಕಾಡಿಗೆ ಬೆನ್ನಟ್ಟಲು ಎಲಿಫೆಂಟ್ ಟಾಸ್ಕ್ ಫೋರ್ಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ, ಕಂದಡ್ಕ, ನೀರಬಿದಿರೆ ಪ್ರದೇಶಗಳಲ್ಲಿ ಸಂಚರಿಸಿ ಸಿಡಿಮದ್ದುಗಳನ್ನು ಸಿಡಿಸಿ ಕಾಡಿಗೆ ಅಟ್ಟುವ ಪ್ರಯತ್ನವನ್ನು ರಾತ್ರಿ ಎರಡು ಗಂಟೆವರೆಗೂ ಮಾಡಿದರು. ಇವರಿಗೆ ಸ್ಥಳೀಯ ಯುವಕರು ಸಹಕರಿಸಿದರು.


































