
ಮಂಡ್ಯ, ನ. ೨೪-ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಸಂಕಷ್ಟ ಎದುರಾಗಿರುವ ಹೊತ್ತಲ್ಲೇ, ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇದರಿಂದಾಗಿ ಅಣೆಕಟ್ಟೆಯ ಹೊರಹರಿವಿನ ಪ್ರಮಾಣದಲ್ಲಿ ಏಕಾಏಕಿ ಭಾರೀ ಏರಿಕೆ ಕಂಡುಬಂದಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದಿನ ೧೫ ದಿನಗಳ ಕಾಲ ನಿತ್ಯ ೨ ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಈ ಆದೇಶದ ಕುರಿತು ನಾಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಹತ್ವದ ಸಭೆ ನಡೆಸಲಿದೆ. ಆದರೆ ಪ್ರಾಧಿಕಾರದ ಸಭೆಗೂ ಮುನ್ನವೇ ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆಯಷ್ಟೇ ಕೇವಲ ಕುಡಿಯುವ ನೀರು ಹಾಗೂ ಸ್ಥಳೀಯ ನಾಲೆಗಳಿಗಾಗಿ ೩,೮೩೪ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಆದರೆ ಇಂದು ದಿಢೀರನೆ ಹೊರಹರಿವಿನ ಪ್ರಮಾಣವನ್ನು ೫,೩೩೩ ಕ್ಯೂಸೆಕ್ಗೆ ಹೆಚ್ಚಿಸಲಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಸುಮಾರು ೨,೦೦೦ ಕ್ಯೂಸೆಕ್ನಷ್ಟು ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.
ಅಣೆಕಟ್ಟೆಯಲ್ಲಿ ಪ್ರಸ್ತುತ ೨೦.೦೦೬ ಟಿಎಂಸಿ ನೀರು ಸಂಗ್ರಹವಿದ್ದರೂ, ಇದರಲ್ಲಿ ಬಳಕೆಗೆ ಯೋಗ್ಯವಾಗಿ ರುವುದು ಕೇವಲ ೧೩ ಟಿಎಂಸಿ ನೀರು ಮಾತ್ರ. ಬೇಸಿಗೆ ಸಮೀಪಿಸುತ್ತಿರುವ ಬೆನ್ನಲ್ಲೇ, ಕೇವಲ ೧೩ ಟಿಎಂಸಿ ನೀರನ್ನ ಉಳಿಸಿಕೊಂಡು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಕಾವೇರಿ ನದಿ ಪಾತ್ರದ ನಗರಗಳಿಗೆ ಕುಡಿಯುವ ನೀರಿನ ಭಾರೀ ಭಾವ ಸೃಷ್ಟಿಸುವ ಆತಂಕ ಎದುರಾಗಿದೆ.
ಕೆಆರ್ಎಸ್ ಡ್ಯಾಂನಲ್ಲಿ ನೀರಿನ ಒಳಹರಿವು ಸಂಪೂರ್ಣ ಕ್ಷೀಣಿಸಿದ್ದು, ಇಂದು ಕೇವಲ ೪೮೩ ಕ್ಯೂಸೆಕ್ ನೀರು ಮಾತ್ರ ಹರಿದುಬರುತ್ತಿದೆ. ಜಲಾಶಯದ ನೀರಿನ ಮಟ್ಟ ತೀವ್ರ ಕುಸಿತ ಕಂಡಿದ್ದು, ಸದ್ಯ ೨೬.೨೪ ಅಡಿಗಳಷ್ಟು ಮಾತ್ರ ನೀರಿದೆ.






















