
ಎಲ್‌ನಿನೋ ಎಫೆಕ್ಟ್
ಬೆಂಗಳೂರು, ಜು.೫: ಎಲ್‌ನಿನೋ ಪರಿಣಾಮದಿಂದ ಮುಂಗಾರು ಮಳೆಯ ಕೊರತೆ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ನಗರದ ಕುಡಿಯುವ ನೀರಿನ ಭದ್ರತೆ ಕಾಪಾಡುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಃWSSಃ) ಮೂರು ಮಹತ್ವದ ಆದೇಶಗಳನ್ನು ಜಾರಿಗೊಳಿಸಿದೆ.
ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳ ಈ ಕುರಿತು ಮಾಹಿತಿ ನೀಡಿ, ನಗರದಲ್ಲಿ ಪ್ರತಿಯೊಂದು ಹನಿ ನೀರನ್ನು ಜವಾಬ್ದಾರಿಯುತವಾಗಿ ಬಳಸುವ ಸಂಸ್ಕೃತಿ ಬೆಳೆಸುವುದು ಹಾಗೂ ಕುಡಿಯುವ ನೀರಿನ ದುರ್ಬಳಕೆಗೆ ಕಡಿವಾಣ ಹಾಕುವುದು ಈ ಕ್ರಮಗಳ ಉದ್ದೇಶ ಎಂದು ತಿಳಿಸಿದ್ದಾರೆ.
ಹೊಸ ಆದೇಶದಂತೆ ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು ಹಾಗೂ ಕೈಗಾರಿಕೆಗಳು ಸೇರಿದಂತೆ ಎಲ್ಲಾ ಕಟ್ಟಡಗಳಲ್ಲಿ ಫ್ಲೋ ರಿಸ್ಟ್ರಿಕ್ಟರ್/ಏರೇಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಇದರಿಂದ ನೀರಿನ ಬಳಕೆಯನ್ನು ಶೇ.೩೦ರಿಂದ ೫೦ರವರೆಗೆ ಕಡಿಮೆ ಮಾಡಬಹುದಾಗಿದೆ.
ಅದೇ ರೀತಿ ವಾಹನ ತೊಳೆಯುವುದು, ಉದ್ಯಾನಗಳಿಗೆ ನೀರು ಹಾಯಿಸುವುದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಸ್ವಚ್ಛತೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಲಾಗಿದೆ. ಇಂತಹ ಅಗತ್ಯಗಳಿಗೆ ಸಂಸ್ಕರಿತ (ಟ್ರೀಟೆಡ್) ನೀರನ್ನೇ ಬಳಸುವಂತೆ ಸೂಚಿಸಲಾಗಿದೆ.
ನಗರದ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳನ್ನು ಕುಡಿಯುವ ನೀರಿನಿಂದ ತುಂಬಿಸುವುದಕ್ಕೂ ನಿಷೇಧ ಹೇರಲಾಗಿದ್ದು, ಪರ್ಯಾಯ ಮೂಲಗಳ ನೀರನ್ನು ಬಳಸುವಂತೆ ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸುವವರಿಗೆ ೫,೦೦೦ ದಂಡ ವಿಧಿಸಲಾಗುವುದು. ಉಲ್ಲಂಘನೆ ಮುಂದುವರಿದರೆ ಪ್ರತಿದಿನ ೫೦೦ ಹೆಚ್ಚುವರಿ ದಂಡ ವಿಧಿಸುವುದರ ಜೊತೆಗೆ ಜಲಮಂಡಳಿ ಸರಬರಾಜು ಮಾಡುವ ನೀರಿನ ಪ್ರಮಾಣವನ್ನು ಶೇ.೫೦ರವರೆಗೆ ಕಡಿತಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
“ಕುಡಿಯುವ ನೀರು ಅಮೂಲ್ಯ ನೈಸರ್ಗಿಕ ಸಂಪತ್ತು. ನೀರಿನ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಏರೇಟರ್ ಅಳವಡಿಸಿ, ನೀರಿನ ದುರ್ಬಳಕೆ ತಪ್ಪಿಸುವ ಮೂಲಕ ಜಲ ಸಂರಕ್ಷಣೆಯ ಜನಾಂದೋಲನಕ್ಕೆ ಎಲ್ಲರೂ ಕೈಜೋಡಿಸಬೇಕು” ಎಂದು ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳ ಮನವಿ ಮಾಡಿದ್ದಾರೆ.
































