
ಸಂಜೆ ವಾಣಿ ವಾರ್ತೆ, ಜಮಖಂಡಿ:ವೀರ ಸಿಂಧೂರ ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿ ಜಮಖಂಡಿ ಬೀದಿ ಬದಿ ವ್ಯಾಪಾರಿಗಳ ಹಿತಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ನಗರಸಭೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಡಾ. ಶಶಾಂಕ ವಳವಾಡೆ ಮಾತನಾಡಿ, ವೀರ ಸಿಂಧೂರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಸಮರ್ಪಕ ಸೌಲಭ್ಯಗಳ ಕೊರತೆಯಿಂದ ತೀವ್ರ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ನೀರು ನಿಲ್ಲುವುದು, ಕುಡಿಯುವ ನೀರಿನ ಕೊರತೆ, ವಿದ್ಯುತ್, ಪಾರ್ಕಿಂಗ್, ಸ್ವಚ್ಛತೆ ಹಾಗೂ ಭದ್ರತಾ ವ್ಯವಸ್ಥೆಯ ಅಭಾವದಿಂದ ವ್ಯಾಪಾರ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದರು.
ನಗರಸಭೆಯವರು ವ್ಯಾಪಾರಿಗಳಿಗೆ ಕಟ್ಟೆ ನಿರ್ಮಾಣ, ಮಳೆಗಾಲದ ರಕ್ಷಣೆಗಾಗಿ ಛತ್ರಿ ಹಾಗೂ ಮೇಲ್ಚಾವಣಿ ವ್ಯವಸ್ಥೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಇದುವರೆಗೂ ಅವು ಜಾರಿಯಾಗಿಲ್ಲ. ಮಾರುಕಟ್ಟೆಯಲ್ಲಿ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಿದರೆ ಟ್ರಾಫಿಕ್ ಸಮಸ್ಯೆ ಹಾಗೂ ಅನೈರ್ಮಲ್ಯ ಸಮಸ್ಯೆ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಬೀದಿ ವ್ಯಾಪಾರಿಗಳಿಂದ ಮಾತ್ರ ಸಂಚಾರ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪ ಸರಿಯಲ್ಲ. ಬಸವೇಶ್ವರ ವೃತ್ತದ ಸುತ್ತಮುತ್ತಲಿನ ಕಿರಾಣಿ ಅಂಗಡಿಗಳ ಮುಂದೆ ನಡೆದಿರುವ ಒತ್ತುವರಿಗಳನ್ನೂ ತೆರವುಗೊಳಿಸಬೇಕು. ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾಗಬೇಕು ಎಂದು ಆಗ್ರಹಿಸಿದರು.
ಬೀದಿ ಬದಿ ವ್ಯಾಪಾರಿಗಳ ಹಿತಾಭಿವೃದ್ಧಿ ಸಂಸ್ಥೆಯ ಖಜಾಂಚಿ ಮುತ್ತಪ್ಪ ಭಜಂತ್ರಿ ಮಾತನಾಡಿ, ನಗರಸಭೆ ಅಧಿಕಾರಿಗಳ ಭರವಸೆಯ ಮೇರೆಗೆ ವ್ಯಾಪಾರಿಗಳು ವೀರ ಸಿಂಧೂರ ಮಾರುಕಟ್ಟೆಗೆ ಸ್ಥಳಾಂತರಗೊAಡಿದ್ದರು. ಆದರೆ ಮೂರು ತಿಂಗಳು ಕಳೆದರೂ ಅಗತ್ಯ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಇದರಿಂದ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಮಾರುಕಟ್ಟೆಯಲ್ಲಿ ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ, ಪಾರ್ಕಿಂಗ್, ಮಳೆ ನೀರು ಹರಿಯುವ ವ್ಯವಸ್ಥೆ ಹಾಗೂ ಭದ್ರತಾ ಸಿಬ್ಬಂದಿಯ ವ್ಯವಸ್ಥೆ ತಕ್ಷಣ ಕಲ್ಪಿಸಬೇಕು. ಪೂರ್ಣ ಪ್ರಮಾಣದ ಮಾರುಕಟ್ಟೆ ಸೌಲಭ್ಯ ಒದಗಿಸುವವರೆಗೆ ಹಳೆಯ ಸ್ಥಳದಲ್ಲಿಯೇ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಪಾರೂಕ ರಾ. ಬಾಗವಾನ, ಅಧ್ಯಕ್ಷ ನಬಿಸಾಬ ಮುಲ್ಲಾ, ಉಪಾಧ್ಯಕ್ಷ ಯಮನಪ್ಪ ಘಾಟಗೆ, ಸಂಜು ಕಾಂಬಳೆ, ತಾಲೂಕಾ ಪ್ರಧಾನ ಕಾರ್ಯದರ್ಶಿ ಮಹಮ್ಮದಫಾರೂಕ ಫೌಜಿ, ಸಹ ಕಾರ್ಯದರ್ಶಿ ಯಲ್ಲಪ್ಪ ಬಜಂತ್ರಿ, ಸಂಘಟನಾ ಕಾರ್ಯದರ್ಶಿ ಪರಸಪ್ಪ ಮಾಳಿ ಸೇರಿದಂತೆ ಬೀದಿ ಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು




























