Home ಜಿಲ್ಲೆ ವಿದ್ಯೆಗೆ ವಿನಯವೇ ಭೂಷಣ: ಸಂಗಮೇಶ್ವರ ಶ್ರೀಗಳು

ವಿದ್ಯೆಗೆ ವಿನಯವೇ ಭೂಷಣ: ಸಂಗಮೇಶ್ವರ ಶ್ರೀಗಳು

ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೫: ದೇವರು ಎಷ್ಟು ಸತ್ಯವೋ, ದೇವರು ನಿರ್ಮಿಸಿದ ಈ ಸುಂದರ ಜಗತ್ತೂ ಅಷ್ಟೇ ಸತ್ಯವಾಗಿದೆ. ಗಿಡ-ಮರಗಳು, ಸಾಗರ-ಸರೋವರಗಳು, ಪ್ರಾಣಿ-ಪಕ್ಷಿಗಳು ಸೇರಿದಂತೆ ಸಮಸ್ತ ಸೃಷ್ಟಿಯನ್ನು ಪೋಷಿಸಿ, ರಕ್ಷಿಸುವ ದೇವರೇ ಸರ್ವಶ್ರೇಷ್ಠರು. ಅವರಿಗಿಂತ ಮಿಗಿಲಾದವರು ಯಾರೂ ಇಲ್ಲ. ದೇವರ ಇಚ್ಛೆಯಿಲ್ಲದೆ ಒಂದು ತೃಣವೂ ಅಲುಗಾಡುವುದಿಲ್ಲ ಎಂಬ ಅರಿವಿನಿಂದ ಮನುಷ್ಯ ಬದುಕಬೇಕು ಎಂದು ಸಂಗಮೇಶ್ವರ ಶ್ರೀಗಳು ಹೇಳಿದರು.
ಬೊಳೆಗಾಂವದ ನೂತನ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಸತ್ಸಂಗದಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯನು ತಾನು ಸಣ್ಣವನು, ದೇವರು ಮತ್ತು ಧರ್ಮ ದೊಡ್ಡದು ಎಂಬ ಭಾವನೆಯೊಂದಿಗೆ ಬದುಕಬೇಕು. ಎಲ್ಲಕ್ಕಿಂತ ತಾನೇ ಶ್ರೇಷ್ಠ ಎಂಬ ಅಹಂಕಾರವನ್ನು ಬೆಳೆಸಿಕೊಳ್ಳಬಾರದು. ನಿರಹಂಕಾರವು ಬದುಕನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ; ಅಹಂಕಾರವು ಭವ್ಯ ಬದುಕನ್ನೂ ಸರ್ವನಾಶಗೊಳಿಸುತ್ತದೆ ಎಂದು ತಿಳಿಸಿದರು.
ವಿದ್ಯೆಯೊಂದಿಗೆ ವಿನಯವೂ ಇರಬೇಕೆಂಬ ಸಂದೇಶವನ್ನು ಅವರು ಒಂದು ಉದಾಹರಣೆಯ ಮೂಲಕ ವಿವರಿಸಿದರು. ಸಿರಿವಂತನೊಬ್ಬ ತನ್ನ ಮಗನನ್ನು ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಕಳುಹಿಸಿದ್ದ. ಹಲವು ವರ್ಷಗಳ ಬಳಿಕ ಪದವಿ ಪಡೆದು ಊರಿಗೆ ಮರಳಿದ ಮಗನನ್ನು ಹೊಲಕ್ಕೆ ಕರೆದುಕೊಂಡು ಹೋದ ತಂದೆ, “ಭತ್ತದ ತೆನೆ ಏಕೆ ಬಾಗಿದೆ?” ಎಂದು ಕೇಳಿದಾಗ, “ತೆನೆ ತುಂಬಿರುವುದರಿAದ ಬಾಗಿದೆ” ಎಂದು ಉತ್ತರಿಸಿದ. ಬಳಿಕ ಬಾಳೆಗೊನಿಯನ್ನು ತೋರಿಸಿ ಕೇಳಿದಾಗ, “ಹಣ್ಣುಗಳಿಂದ ತುಂಬಿರುವುದರಿAದ ಬಾಗಿದೆ” ಎಂದನು.
ಆಗ ತಂದೆ, “ಹೇಗೆ ಭತ್ತದ ತೆನೆ ಮತ್ತು ಬಾಳೆಗೊನಿ ಫಲಭರಿತವಾಗಿರುವುದರಿಂದ ಬಾಗುತ್ತವೆಯೋ, ಹಾಗೆಯೇ ಸದ್ಗುಣ, ಸದ್ಭಕ್ತಿ ಹಾಗೂ ಸದಾಚಾರದಿಂದ ತುಂಬಿರುವ ವ್ಯಕ್ತಿಯೂ ವಿನಯದಿಂದ ಬಾಗಿರುತ್ತಾನೆ. ಅಹಂಕಾರಿಯು ಎಂದಿಗೂ ತಲೆಬಾಗುವುದಿಲ್ಲ” ಎಂದು ತಿಳಿಸಿದಾಗ ಮಗನಿಗೆ ತನ್ನ ತಪ್ಪಿನ ಅರಿವಾಯಿತು ಎಂದು ಶ್ರೀಗಳು ಹೇಳಿದರು.
ನಾವು ಎಷ್ಟು ವಿದ್ಯಾಭ್ಯಾಸ ಮಾಡಿದ್ದೇವೆ ಎನ್ನುವುದಕ್ಕಿಂತ, ಎಷ್ಟು ವಿನಯವನ್ನು ಬೆಳೆಸಿಕೊಂಡಿದ್ದೇವೆ ಎಂಬುದೇ ಮುಖ್ಯ. ಆದ್ದರಿಂದಲೇ ಅನುಭಾವಿಗಳು “ವಿದ್ಯೆಗೆ ವಿನಯವೇ ಭೂಷಣ” ಎಂದು ಸಾರಿದ್ದಾರೆ ಎಂದು ಸಂಗಮೇಶ್ವರ ಶ್ರೀಗಳು ಹೇಳಿದರು.