
ಬೆಂಗಳೂರು, ಜೂ. 27: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ನಿರ್ಮಾಪಕ ಭಾಮಾ ಹರೀಶ್ ಅವರ ಪುತ್ರ ಉಲ್ಲಾಸಗೌಡ (30) ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ವೇಳೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕುಟುಂಬದ ಮೂಲಗಳ ಪ್ರಕಾರ, ಉಲ್ಲಾಸಗೌಡ ಅವರು ಸ್ನೇಹಿತರೊಂದಿಗೆ ಕೊಡಚಾದ್ರಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ನಿನ್ನೆ ಚಾರಣಕ್ಕಾಗಿ ಬೆಟ್ಟಕ್ಕೆ ತೆರಳಿದ್ದ ಅವರು, ಶನಿವಾರ ಬೆಳಿಗ್ಗೆ ಬೆಟ್ಟ ಏರುವ ವೇಳೆ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಸಂಭವಿಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಉಲ್ಲಾಸಗೌಡ ಅವರು ತಂದೆ ಭಾಮಾ ಹರೀಶ್ ಅವರ ನಿರ್ಮಾಣ ಸಂಸ್ಥೆ ಹಾಗೂ ಇತರೆ ವ್ಯವಹಾರಗಳ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜೊತೆಗೆ, ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಉದ್ದೇಶದಿಂದ ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಎಂಬ ನಟನಾ ತರಬೇತಿ ಸಂಸ್ಥೆಯನ್ನೂ ನಡೆಸುತ್ತಿದ್ದರು.
ಉಲ್ಲಾಸಗೌಡ ಅವರ ಅಕಾಲಿಕ ನಿಧನ ಕುಟುಂಬಸ್ಥರು, ಸ್ನೇಹಿತರು ಹಾಗೂ ಕನ್ನಡ ಚಿತ್ರರಂಗದ ಗಣ್ಯರಿಗೆ ತೀವ್ರ ಆಘಾತ ಉಂಟುಮಾಡಿದೆ. ಭಾಮಾ ಹರೀಶ್ ಅವರು ನಿರ್ಮಾಪಕರಾಗಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿ ಚಿತ್ರರಂಗಕ್ಕೆ ಗಮನಾರ್ಹ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅವರ ಪುತ್ರನ ನಿಧನಕ್ಕೆ ಚಿತ್ರರಂಗದ ಹಲವರು ಸಂತಾಪ ಸೂಚಿಸುತ್ತಿದ್ದಾರೆ.





















