Home ಜಿಲ್ಲೆ ಪ್ರೀತಿ ವಂಚಿತ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತನ್ನಿ: ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ

ಪ್ರೀತಿ ವಂಚಿತ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತನ್ನಿ: ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ

ಸಂಜೆವಾಣಿ ವಾರ್ತೆ,ವಿಜಯಪುರ, ಜು. ೫: ವಿವಿಧ ಕಾರಣಗಳಿಂದ ತಂದೆ-ತಾಯಿ ಹಾಗೂ ಪೋಷಕರ ಪ್ರೀತಿ-ವಾತ್ಸಲ್ಯದಿಂದ ವಂಚಿತರಾಗಿರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರಿಗೆ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.
ನಗರದ ಬಾಗಲಕೋಟೆ ರಸ್ತೆಯಲ್ಲಿರುವ ವಿಜಯಪುರ ಅರ್ಫನೇಜ್ ಸಂಸ್ಥೆಯ ಬಾಲಕರ ಬಾಲಮಂದಿರದಲ್ಲಿ ತಮ್ಮ ಪುತ್ರ ಡಾ. ಮಯೂರ್ ರಾಮನಗೌಡ ಪಾಟೀಲ ಅವರ ಜನ್ಮದಿನವನ್ನು ಕುಟುಂಬ ಸಮೇತ ಸರಳವಾಗಿ ಆಚರಿಸಿ, ಮಕ್ಕಳಿಗೆ ಸವಿಭೋಜನ, ಪೆನ್ನು ಹಾಗೂ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ಮಕ್ಕಳು ದೇಶದ ಭವಿಷ್ಯವಾಗಿದ್ದು, ಯಾವುದೇ ಮಗು ಪ್ರೀತಿ, ವಾತ್ಸಲ್ಯ ಹಾಗೂ ಮೂಲಭೂತ ಹಕ್ಕುಗಳಿಂದ ವಂಚಿತವಾಗಬಾರದು. ಸರ್ಕಾರ ಇಂತಹ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಆಹಾರ, ವಸತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಈ ಕಾರ್ಯದಲ್ಲಿ ಅಧಿಕಾರಿಗಳ ಜೊತೆಗೆ ಸ್ವಯಂಸೇವಾ ಸಂಘಟನೆಗಳು ಹಾಗೂ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಹಿರಿಯ ಸಮಾಜಸೇವಕ ಹಾಗೂ ಬಾಲಮಂದಿರ ಆಡಳಿತ ಮಂಡಳಿ ಕಾರ್ಯದರ್ಶಿ ಫೀಟರ್ ಅಲೆಕ್ಸಾಂಡರ್ ಮಾತನಾಡಿ, ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣ, ಸಂಸ್ಕಾರ, ಮಾನವೀಯ ಮೌಲ್ಯಗಳು ಹಾಗೂ ಸಹಕಾರ ಮನೋಭಾವವನ್ನು ಬೆಳೆಸಬೇಕು ಎಂದರು. ಶತಮಾನಗಳ ಇತಿಹಾಸ ಹೊಂದಿರುವ ವಿಜಯಪುರ ಅರ್ಫನೇಜ್ ಸಂಸ್ಥೆಯ ಬೆಳವಣಿಗೆಗೆ ಸರ್ಕಾರ, ಅಧಿಕಾರಿಗಳು, ಸಂಘ-ಸAಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಮಹತ್ವದ್ದಾಗಿದೆ ಎಂದು ಹೇಳಿದರು.
ನಿಕಟಪೂರ್ವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹಾಗೂ ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ಪೋಷಕರ ಪ್ರೀತಿಯಿಂದ ವಂಚಿತರಾದ ಮಕ್ಕಳು ದುಷ್ಟಶಕ್ತಿಗಳ ಪ್ರಭಾವಕ್ಕೆ ಒಳಗಾಗುವ ಮುನ್ನವೇ ಅವರನ್ನು ಬಾಲಮಂದಿರ, ವೀಕ್ಷಣಾಲಯ ಅಥವಾ ಅರ್ಹ ಸಂಸ್ಥೆಗಳಲ್ಲಿ ಆಶ್ರಯ ನೀಡಿ, ದತ್ತು ಯೋಜನೆಗಳ ಮೂಲಕ ಉತ್ತಮ ಕುಟುಂಬಗಳಿಗೆ ಸೇರಿಸುವ ಮೂಲಕ ಆದರ್ಶ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.
ಬಾಲಮಂದಿರದ ಅಧೀಕ್ಷಕ ಬಿ.ಎಲ್. ದೇಸಾಯಿ ಮಾತನಾಡಿ, ಸಾರ್ವಜನಿಕರು ತಮ್ಮ ಕುಟುಂಬದ ಸಂತಸದ ಕ್ಷಣಗಳನ್ನು ಬಾಲಮಂದಿರದ ಮಕ್ಕಳೊಂದಿಗೆ ಹಂಚಿಕೊಳ್ಳುವುದು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದ ಮಕ್ಕಳಲ್ಲಿ ಸಮಾಜ ನಮ್ಮೊಂದಿಗಿದೆ ಎಂಬ ಆತ್ಮವಿಶ್ವಾಸ ಬೆಳೆಯುತ್ತದೆ. ಸರ್ಕಾರದ ನಿಯಮಾನುಸಾರ ಕೇಕ್ ಕತ್ತರಿಸುವುದು, ಜಂಕ್ ಫುಡ್ ವಿತರಿಸುವುದು, ಪಟಾಕಿ ಸಿಡಿಸುವುದು ಹಾಗೂ ಅತಿಯಾದ ಶಬ್ದದ ಸಂಗೀತಕ್ಕೆ ಅವಕಾಶವಿಲ್ಲದಿದ್ದರೂ, ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಅವಕಾಶವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಮಯೂರ್ ರಾಮನಗೌಡ ಪಾಟೀಲ ಅವರನ್ನು ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಜನ್ಮದಿನದ ಶುಭಾಶಯ ಕೋರಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ ಹಿರೇಮಠ, ಡಾ. ರಾಮನಗೌಡ ಎಸ್. ಪಾಟೀಲ, ವೈಭವಿ ಪಾಟೀಲ ಹಾಗೂ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.
ಬಾಲಮಂದಿರದ ಮಕ್ಕಳು ಜನ್ಮದಿನದ ಗೀತೆಗಳನ್ನು ಹಾಡಿ ಶುಭಾಶಯ ಕೋರಿದರು. ಅನಸೂಯ ಸಂಧಿಮನಿ ಮತ್ತು ಗೀತಾ ಪವಾರ ಪ್ರಾರ್ಥನೆ ನೆರವೇರಿಸಿದರು. ಸಿದ್ದು ಪಟ್ಟಣಶೆಟ್ಟಿ ಸ್ವಾಗತ ಗೀತೆ ಹಾಡಿದರು. ಪ್ರಕಾಶ ಮೇತ್ರಿ ಸ್ವಾಗತಿಸಿದರು. ಆರತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ಯಲ್ಲೂಬಾಯಿ ಚೌಹಾಣ್ ವಂದಿಸಿದರು. ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಸವಿಭೋಜನ ವ್ಯವಸ್ಥೆ ಮಾಡಲಾಯಿತು.