
ಮುಂಬೈ. ಜು .೫- ವಾಣಿಜ್ಯ ನಗರಿ ಮುಂಬೈ ಮತ್ತು ಅದರ ಸುತ್ತಮುತ್ತಲಿನ ಉಪನಗರಗಳಲ್ಲಿ ಮುಂಗಾರು ಮಳೆಯ ಆರ್ಭಟ ತೀವ್ರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿ ಗಂಭೀರವಾಗಿರುವುದನ್ನು ಮನಗಂಡಿರುವ ಭಾರತೀಯ ಹವಾಮಾನ ಇಲಾಖೆ ಇಂದು ಇಡೀ ನಗರ ಮತ್ತು ಉಪನಗರಗಳಿಗೆ ‘ರೆಡ್ ಅಲರ್ಟ್’ ಎಚ್ಚರಿಕೆ ಘೋಷಿಸಿದೆ.
ಮುಂದಿನ ೨೪ ಗಂಟೆಗಳಲ್ಲಿ ಮುಂಬೈನಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮಳೆಯೊಂದಿಗೆ ಗಂಟೆಗೆ ೬೦ ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಧಾರಾಕಾರ ಮಳೆಯ ನಡುವೆಯೂ ಮುಂಬೈನ ಲೈಫ್‌ಲೈನ್ ಎಂದೇ ಕರೆಯಲ್ಪಡುವ ಸ್ಥಳೀಯ ರೈಲುಗಳು, ಮೆಟ್ರೋ ಹಾಗೂ ಬೆಸ್ಟ್ ಬಸ್ ಸೇವೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಿಲ್ಲ. ಆದರೆ, ನಿರಂತರ ಮಳೆಯಿಂದಾಗಿ ಹಳಿಗಳ ಮೇಲೆ ನೀರು ನಿಲ್ಲುತ್ತಿರುವುದರಿಂದ ಉಪನಗರ ರೈಲ್ವೆ ಮಾರ್ಗಗಳಲ್ಲಿ ರೈಲುಗಳ ಸಂಚಾರ ತೀವ್ರ ವಿಳಂಬವಾಗಿ ಚಲಿಸುತ್ತಿವೆ. ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.
ನಗರದ ಪ್ರಮುಖ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ಅಂಧೇರಿ ಸಬ್‌ವೇಯನ್ನು ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇನ್ನು ಭಾಂಡುಪ್ ಪ್ರದೇಶದಲ್ಲಿ ಭಾರೀ ಮಳೆಗೆ ರಸ್ತೆಯೊಂದು ಕುಸಿದಿದ್ದು, ನಿಲ್ಲಿಸಲಾಗಿದ್ದ ಹಲವು ವಾಹನಗಳು ನೀರಿನಲ್ಲಿ ಮುಳುಗಿವೆ. ವಿಮಾನ ನಿಲ್ದಾಣದ ಕಾರ್ಯಾಚರಣೆ ಹಾಗೂ ವಿಮಾನಗಳ ಹಾರಾಟದ ಮೇಲೆಯೂ ನಿರಂತರ ನಿಗಾ ಇಡಲಾಗಿದೆ.
ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾಗರಿಕರು ಅತ್ಯಗತ್ಯ ಕೆಲಸಗಳಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು, ಅನಗತ್ಯ ಪ್ರಯಾಣವನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ.
ಮುಂಬೈ ಮಾತ್ರವಲ್ಲದೆ ನೆರೆಯ ಥಾಣೆ, ಪಾಲ್ಘರ್, ರಾಯಗಢ್, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಇನ್ನು ಪುಣೆ, ಸತಾರಾ ಮತ್ತು ನಾಸಿಕ್‌ನ ಘಾಟ್ ಪ್ರದೇಶಗಳಲ್ಲಿಯೂ ಮಧ್ಯಮದಿಂದ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಸದ್ಯಕ್ಕೆ ಮುಂಬೈಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಕೆರೆಗಳ ನೀರಿನ ಮಟ್ಟದ ಮೇಲೆಯೂ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸಿದ್ದಾರೆ.
































