
ಬೆಂಗಳೂರು, ಜು .೫- ತುಮಕೂರಿನಲ್ಲಿ ಭುವನಾ ಸಾವಿನ ಬೆನ್ನಲ್ಲೇ ರಾಜ್ಯದಲ್ಲಿ ಇನ್ನಿಬ್ಬರು ಬಿಎಲ್‌ಒಗಳು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿನ ನಟರಾಜ್ ಹಾಗೂ ಬೀದರ್ ಜಿಲ್ಲೆಯ ಸುನೀಲ್(೪೫) ಸಾವು ಕಂಡ ಬಿಎಲ್‌ಒಗಳು.
ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಎಲ್‌ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ನಟರಾಜ್ ನಿನ್ನೆ ಮನೆಯಿಂದ ಕರ್ತವ್ಯಕ್ಕೆ ಹೊರಟಿದ್ದ ವೇಳೆ ಏಕಾಏಕಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಇನ್ನು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೂಲದ ಸುನೀಲ್ ಅಮಲಾಪುರ ಗ್ರಾಮದ ೩೩ನೇ ಬೂತ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಬಳಿಕ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ವೇಳೆ ಸ್ಟಂಟ್ ಅಳವಡಿಸುವ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನು ನಿನ್ನೆಯಷ್ಟೇ ತುಮಕೂರಿನ ಗೂಳೂರು ಬಳಿ ಎಸ್‌ಐಆರ್ ಪ್ರಕ್ರಿಯೆಗೆ ತೆರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಭುವನಾ ಅವರ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಹೃದಯಾಘಾತದಿಂದ ಇಬ್ಬರು ಬಿಎಲ್‌ಒಗಳು ಸಾವನ್ನಪ್ಪಿದ್ದಾರೆ.
































