Home ಸಿನೆಮಾ ಶ್ರಾವಣಿ’ ಕಿರುಚಿತ್ರಕ್ಕೆ ಭರ್ಜರಿ ಮೆಚ್ಚುಗೆ

ಶ್ರಾವಣಿ’ ಕಿರುಚಿತ್ರಕ್ಕೆ ಭರ್ಜರಿ ಮೆಚ್ಚುಗೆ

ಹೌಸ್‌ಫುಲ್ ಪ್ರದರ್ಶನದಿಂದ ಗಮನ ಸೆಳೆದ ತಂಡ

ಪ್ರೇಮ ಮತ್ತು ಭಾವನಾತ್ಮಕ ಕಥಾಹಂದರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ‘ಶ್ರಾವಣಿ’ ಕಿರುಚಿತ್ರ ಇದೀಗ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಎರಡು ಭಾಗಗಳಾಗಿ ನಿರ್ಮಾಣಗೊಂಡಿರುವ ಈ ಕಿರುಚಿತ್ರದ ಮೊದಲ ಪ್ರದರ್ಶನ ಇತ್ತೀಚೆಗೆ ಬೆಂಗಳೂರಿನ ವಿಕ್ಟರಿ ಸಿನಿಮಾಸ್‌ನಲ್ಲಿ ನಡೆದಿದ್ದು, ಹೌಸ್‌ಫುಲ್ ಪ್ರದರ್ಶನ ಕಂಡು ವಿಶೇಷ ಗಮನ ಸೆಳೆದಿದೆ.

ಮುಳಬಾಗಿಲು ಮೂಲದ ವಿಕ್ರಮ್ ಕುಮಾರ್ ನಿರ್ದೇಶಿಸಿರುವ ಈ ಕಿರುಚಿತ್ರವು ಅವರ ನಿರ್ದೇಶನದ ಮೊದಲ ಪ್ರಯತ್ನವಾಗಿದೆ. ಅವರು ಹೇಳಿದ ಕಥೆಯಿಂದ ಪ್ರಭಾವಿತರಾದ ಅಶೋಕ್ ಮೋದಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಚಿತ್ರವನ್ನು ರೂಪಿಸಿದ್ದಾರೆ.

ಹರ್ಷ ಕಲ್ಯಾಣ್ ಮತ್ತು ರಾಣಿ ಎಂ. ಅಂಗಡಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ದೀಪ, ಶ್ರೀವೈಷ್ಣವ್, ರಂಗನಾಥ್ ಸೇರಿದಂತೆ ಹಲವರು ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರಿಂದ ದೊರೆತ ಉತ್ತಮ ಪ್ರತಿಕ್ರಿಯೆ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ.

ಪ್ರದರ್ಶನದ ಬಳಿಕ ಮಾತನಾಡಿದ ನಿರ್ದೇಶಕ ವಿಕ್ರಮ್ ಕುಮಾರ್, “ನಿರ್ದೇಶಕನಾಗಬೇಕೆಂಬ ಕನಸಿನ ಮೊದಲ ಹೆಜ್ಜೆಯಾಗಿ ‘ಶ್ರಾವಣಿ’ ಮೂಡಿಬಂದಿದೆ. ಪ್ರೇಮ ಮತ್ತು ಸೆಂಟಿಮೆಂಟ್‌ ಕಥಾಹಂದರ ಹೊಂದಿರುವ ಈ ಕಿರುಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಂಡಿದ್ದು, ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಜೂನ್ 26ರಂದು ನಾನ್‌ಸ್ಟಾಪ್ ಎಂಟರ್‌ಟೈನ್‌ಮೆಂಟ್ ಓಟಿಟಿ ಹಾಗೂ ಟಿ.ಎಂ.ಪಿ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ” ಎಂದು ಹೇಳಿದರು.

ಕಿರುಚಿತ್ರಕ್ಕೆ ವಿಜಯ್ ಮೊಂಟೆರಿಯೊ ಛಾಯಾಗ್ರಹಣ ಹಾಗೂ ರೋಹಿತ್ ಪೂಜಾರಿ ಸಂಗೀತ ನಿರ್ದೇಶನ ನೀಡಿದ್ದು, ಒಂದು ವಿಶೇಷ ಹಾಡು ಕೂಡ ಒಳಗೊಂಡಿದೆ.

ನಾಯಕ ಹರ್ಷ ಕಲ್ಯಾಣ್ ಮಾತನಾಡಿ, “ನಟನಾಗಬೇಕೆಂಬ ನನ್ನ ಬಹುಕಾಲದ ಕನಸು ‘ಶ್ರಾವಣಿ’ ಮೂಲಕ ನನಸಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು. ನಾಯಕಿ ರಾಣಿ ಎಂ. ಅಂಗಡಿ, ನಟಿ ದೀಪ ಹಾಗೂ ರಂಗನಾಥ್ ತಮ್ಮ ಪಾತ್ರಗಳ ಕುರಿತ ಅನುಭವಗಳನ್ನು ಹಂಚಿಕೊಂಡರು.