Home Lead News ವಿನಯ್‌ಗೆ ಮತ್ತೆ ಜೈಲು

ವಿನಯ್‌ಗೆ ಮತ್ತೆ ಜೈಲು

ಬೆಂಗಳೂರು, ನ. ೨೫- ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರ ಜಾಮೀನು ಆದೇಶವನ್ನು ಸುಪ್ರೀಂಕೋರ್ಟ್ ಇಂದು ರದ್ದುಪಡಿಸಿದ್ದು, ಎರಡು ವಾರಗಳಲ್ಲಿ ಶರಣಾಗುವಂತೆ ಸೂಚಿಸಿದೆ.


ಸುಪ್ರೀಂಕೋರ್ಟ್‌ನ ಈ ಆದೇಶದಿಂದ ಶಾಸಕ ವಿನಯ್ ಕುಲಕರ್ಣಿ ಅವರು ಮತ್ತೆ ಜೈಲಿಗೆ ಹೋಗಲಿದ್ದು, ಶಾಸಕ ಸ್ಥಾನದಿಂದಲೂ ಅನರ್ಹಗೊಳ್ಳಲಿದ್ದಾರೆ.


ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಾಸಕ ವಿನಯ್ ಕುಲಕರ್ಣಿ ಅವರಿಗೆ ರಾಜ್ಯ ಹೈಕೋರ್ಟ್ ಶಿಕ್ಷೆಗೆ ಷರತ್ತು ಬದ್ಧ ತಡೆ ನೀಡಿ ಜಾಮೀನು ಮಂಜೂರು ನೀಡಿತ್ತು. ರಾಜ್ಯ ಹೈಕೋರ್ಟ್‌ನ ತೀರ್ಪುನ್ನು ಪ್ರಶ್ನಿಸಿ ಸಿಬಿಐ ಮತ್ತು ಯೋಗೇಶ್‌ಗೌಡ ಸಹೋದರ ಗುರುನಾಥ್‌ಗೌಡ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.


ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಪ್ರಶಾಂತ್ ಮಿಶ್ರಾ ಹಾಗೂ ಚಂದ್ರಶೇಖರ್ ಅವರ ನ್ಯಾಯಪೀಠವು ಆದೇಶ ಕಾಯ್ದಿರಿಸಿತ್ತು. ಇಂದು ಆದೇಶ ಪ್ರಕಟಿಸಿರುವ ನ್ಯಾಯಾಲಯ ಜಾಮೀನನ್ನು ರದ್ದುಗೊಳಿಸಿ, ೨ ವಾರಗಳಲ್ಲಿ ಶರಣಾಗುವಂತೆ ವಿನಯ್ ಕುಲಕರ್ಣಿ ಅವರಿಗೆ ಸೂಚನೆ ನೀಡಿದೆ.


ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವಿನಯ್ ಕುಲಕರ್ಣಿ ಹೈಕೋರ್ಟ್‌ನಿಂದ ಜಾಮೀನು ಪಡೆದ ಬಳಿಕ ಹೊರಗಿದ್ದರು. ಈಗ ಸುಪ್ರೀಂಕೋರ್ಟ್ ಜಾಮೀನು ರದ್ದುಪಡಿಸಿರುವುದರಿಂದ ಮತ್ತೆ ಜೈಲು ಸೇರುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಅವರ ಶಾಸಕ ಸ್ಥಾನವೂ ಅನರ್ಹಗೊಳ್ಳಲಿದೆ.


ಧಾರವಾಡ ಜಿ.ಪಂ. ಸದಸ್ಯರಾಗಿದ್ದ ಯೋಗೇಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ೨೦೨೬ರ ಏಪ್ರಿಲ್ ೧೫ ರಂದು ವಿನಯ್ ಕುಲಕರ್ಣಿ ಸೇರಿದಂತೆ ೧೬ ಮಂದಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಏ. ೧೭ ರಂದು ವಿನಯ್ ಕುಲಕರ್ಣಿ ಸೇರಿದಂತೆ ೧೬ ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು
ಈ ಪ್ರಕರಣದ ಮತ್ತೊಬ್ಬ ಆ ರೋಪಿ ಚನ್ನಕೇಶವ ಟಿಂಗರಿಕರ್‌ಗೆ ೭ ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.


ಕಳೆದ ಜುಲೈ ೩೧ ರಂದು ಹೈಕೋರ್ಟ್ ಮೇಲ್ಮನವಿ ಇತ್ಯರ್ಥವಾಗುವವರೆಗೂ ಶಿಕ್ಷೆ ಹಾಗೂ ಅಪರಾಧ ನಿರ್ಣಯಕ್ಕೆ ತಡೆ ನೀಡಿ ಜಾಮೀನು ನೀಡಿತ್ತು
ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಬಿಐ ಮತ್ತು ಗುರುನಾಥ್ ಗೌಡ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದರು. ಈ ಹೈಕೋರ್ಟ್ ಜಾಮೀನನ್ನು ರದ್ದುಗೊಳಿಸಿದ್ದು, ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ ಹೋಗುವಂತಾಗಿದೆ.

ಯೋಗೇಶ್‌ಗೌಡ ಹತ್ಯೆ ಪ್ರಕರಣದ ಇತಿಹಾಸ

  • ಜೂನ್ ೧೫, ೨೦೧೬ರಂದು ನಡೆದಿದ್ದ ಯೋಗೇಶ್ ಗೌಡ ಹತ್ಯೆ
  • ೨೦೧೯ರಲ್ಲಿ ರಾಜ್ಯ ಸರ್ಕಾರದಿಂದ ಕೇಸ್ ಸಿಬಿಐಗೆ ಹಸ್ತಾಂತರ
  • ನವೆಂಬರ್ ೫, ೨೦೨೦ರಲ್ಲಿ ವಿನಯ್ ಕುಲಕರ್ಣಿ ಬಂಧನ
  • ಆಗಸ್ಟ್ ೨೦೨೧ರಲ್ಲಿ ಸುಪ್ರೀಂಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು
  • ಮೇ ೨೦೨೩ರಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
  • ಜೂನ್ ೨೦೨೫ರಲ್ಲಿ ಸುಪ್ರೀಂಕೋರ್ಟ್‌ನಿಂದ ಮತ್ತೆ ಜಾಮೀನು ರದ್ದು
  • ಏಪ್ರಿಲ್ ೧೫, ೨೦೨೬ರಂದು ೧೬ ಮಂದಿ ದೋಷಿ ಎಂದು ಜನಪ್ರತಿನಿಧಿ ಕೋರ್ಟ್ ತೀರ್ಪು
  • ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆ ಪ್ರಕಟ
  • ಮೇ ೨೦೨೬ರಲ್ಲಿ ಶಾಸಕ ಸ್ಥಾನ ವಜಾಗೊಳಿಸಿದ ವಿಧಾನಸಭಾಧ್ಯಕ್ಷರು
  • ಜುಲೈ ೩೧, ೨೦೨೬ರಂದು ಹೈಕೋರ್ಟ್‌ನಿಂದ ಶಿಕ್ಷೆಗೆ ತಡೆಯಾಜ್ಞೆ
  • ಆಗಸ್ಟ್ ೨೦೨೬ರಲ್ಲಿ ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ