Home ಜಿಲ್ಲೆ ನಾಳೆಯಿಂದ ಮೂರು ದಿನಗಳ ಕಾನೂನು ಕಾರ್ಯಾಗಾರಕಿರಿಯ ವಕೀಲರು, ಕಾನೂನು ವಿದ್ಯಾರ್ಥಿಗಳು ಸದುಪಯೋಗ ಪಡೆಯಲು ಮನವಿ

ನಾಳೆಯಿಂದ ಮೂರು ದಿನಗಳ ಕಾನೂನು ಕಾರ್ಯಾಗಾರಕಿರಿಯ ವಕೀಲರು, ಕಾನೂನು ವಿದ್ಯಾರ್ಥಿಗಳು ಸದುಪಯೋಗ ಪಡೆಯಲು ಮನವಿ

ಸಂಜೆ ವಾಣಿ ವಾರ್ತೆ
ಜಮಖಂಡಿ, ಆ.೬: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಜಮಖಂಡಿ ತಾಲೂಕು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ ೭ರಿಂದ ೯ರವರೆಗೆ ನಗರದ ಎಸ್‌ಆರ್‌ಎ ಕ್ಲಬ್‌ನ ಸಭಾಭವನದಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರ ನಡೆಯಲಿದ್ದು, ಕಿರಿಯ ವಕೀಲರು, ನ್ಯಾಯಾಂಗ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಹಾಗೂ ಕಾನೂನು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆಯಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ.ಪಿ. ಕುಲಕರ್ಣಿ ಮನವಿ ಮಾಡಿದರು.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ ೭ರಂದು ಬೆಳಿಗ್ಗೆ ೧೦.೩೦ಕ್ಕೆ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಹಮದ್ ಇಂತಿಯಾಜ್ ಅಹಮದ್ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಐ.ಎಂ. ಪಾಟೀಲ, ಜಿ.ವಿ. ಕೋರಿಮಠ, ನಾರಾಯಣಸ್ವಾಮಿ ಜಿ., ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ವೈದ್ಯ ಶ್ರೀಕಾಂತ, ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀಕಾಂತ ರವೀಂದ್ರ, ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ, ವಕೀಲರ ಸಂಘದ ಉಪಾಧ್ಯಕ್ಷೆ ವಿ.ಎ. ಭಟ್ ಹಾಗೂ ಪ್ರಧಾನ ಕಾರ್ಯದರ್ಶಿ ವೈ.ಕೆ. ಕಡಪಟ್ಟಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮೂರು ದಿನಗಳ ಕಾರ್ಯಾಗಾರದಲ್ಲಿ ವಿವಿಧ ಮಹತ್ವದ ಕಾನೂನು ವಿಷಯಗಳ ಕುರಿತು ಹಿರಿಯ ನ್ಯಾಯವಾದಿಗಳು ಹಾಗೂ ಕಾನೂನು ತಜ್ಞರು ಉಪನ್ಯಾಸ ನೀಡಲಿದ್ದಾರೆ. ಮೊದಲ ದಿನದ ಅಧಿವೇಶನದಲ್ಲಿ ಬೆಳಗಾವಿಯ ಹಿರಿಯ ನ್ಯಾಯವಾದಿ ದಿನೇಶ್ ಪಾಟೀಲ ಅವರು ದಿವಾಣಿ ಪ್ರಕ್ರಿಯಾ ಸಂಹಿತೆ, ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆ ಹಾಗೂ ಭೂ ಕಂದಾಯ ಕಾಯ್ದೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಒಡಿಶಾದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್ ಅವರು ‘ನ್ಯಾಯಾಂಗದಲ್ಲಿ ವಕೀಲರ ಪಾತ್ರ’ ವಿಷಯ ಕುರಿತು ಮಾತನಾಡಲಿದ್ದಾರೆ.
ಆಗಸ್ಟ್ ೮ರಂದು ಸಿಐಡಿ ಸರ್ಕಾರಿ ಅಭಿಯೋಜಕ ಹಾಗೂ ಕಾನೂನು ಸಲಹೆಗಾರ ಮಹೇಶ್ ವೈದ್ಯ ಅವರು ವಿದ್ಯುನ್ಮಾನ ಸಾಕ್ಷ್ಯ, ಬೆಂಗಳೂರಿನ ಹಿರಿಯ ವಕೀಲ ರಾಜಶೇಖರ ಜಿ. ಅವರು ಕರ್ನಾಟಕ ಬಾಡಿಗೆ ಅಧಿನಿಯಮ, ಹುಬ್ಬಳ್ಳಿಯ ಹಿರಿಯ ವಕೀಲ ಎಸ್.ಎಸ್. ಖತೀಬ್ ಅವರು ವರ್ಗಾವಣೆ ಲಿಖಿತ ಪತ್ರಗಳ ಅಧಿನಿಯಮ ಕುರಿತು ಉಪನ್ಯಾಸ ನೀಡಲಿದ್ದಾರೆ.
ಆಗಸ್ಟ್ ೯ರಂದು ಧಾರವಾಡದ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್. ಮಿತ್ತಲಕೋಡ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ದಂಡ ಪ್ರಕ್ರಿಯಾ ಸಂಹಿತೆ, ಹಿರಿಯ ನ್ಯಾಯವಾದಿ ಕೆ.ಬಿ. ನಾವಲಗಿಮಠ ಅವರು ಭಾರತೀಯ ಸಾಕ್ಷ್ಯ ಅಧಿನಿಯಮ ಕುರಿತು ಉಪನ್ಯಾಸ ನೀಡಲಿದ್ದು, ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.
ಜಿಲ್ಲೆಯ ಎಲ್ಲ ವಕೀಲರ ಸಂಘಗಳ ಪದಾಧಿಕಾರಿಗಳು, ಕಿರಿಯ ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಎಸ್.ಎ. ಅಂಬ್ಲಿ, ನ್ಯಾಯವಾದಿಗಳಾದ ಆರ್.ಆರ್. ಕರೋಶಿ, ಆರ್.ಎಂ. ಝಂಡೆ, ಎಸ್.ಕೆ. ದಳವಾಯಿ, ಎನ್.ಎ. ಅತ್ತಾರ, ಜೆ.ಆರ್. ಮಾಳಿ, ವ್ಹಿ.ಜಿ. ಅಳ್ಳಿಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂರು ದಿನಗಳ ಕಾರ್ಯಾಗಾರದ ಪ್ರಮುಖ ವಿಷಯಗಳು
? ಆ.೭: ದಿವಾಣಿ ಪ್ರಕ್ರಿಯಾ ಸಂಹಿತೆ, ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆ, ಭೂ ಕಂದಾಯ ಕಾಯ್ದೆ, ನ್ಯಾಯಾಂಗದಲ್ಲಿ ವಕೀಲರ ಪಾತ್ರ.
? ಆ.೮: ವಿದ್ಯುನ್ಮಾನ ಸಾಕ್ಷ್ಯ, ಕರ್ನಾಟಕ ಬಾಡಿಗೆ ಅಧಿನಿಯಮ, ವರ್ಗಾವಣೆ ಲಿಖಿತ ಪತ್ರಗಳ ಅಧಿನಿಯಮ.
? ಆ.೯: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮ ಹಾಗೂ ಸಮಾರೋಪ ಸಮಾರಂಭ.