ಕಲಬುರಗಿ,ಅ.17: ಕೈಗಾರಿಕೆ, ಉದ್ಯೋಗ ಸೃಷ್ಟಿ ಮತ್ತು ಪರಿಸರ ಸಂರಕ್ಷಣೆ ನಡುವೆ ಸಮತೋಲನ ಇದ್ದಾಗ ಯಾವುದೇ ಪ್ರದೇಶ ಕಲ್ಯಾಣ ಸುಸ್ಥಿರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಮ್.ಎಸ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ಇಲ್ಲಿನ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಸುಮಾರು 30 ‘ಸಿ’ ವೃಂದದ ನೌಕರರು ಮತ್ತು ಅಧಿಕಾರಿಗಳಿಗೆ ಎರಡು ದಿನಗಳ ಕಾಲ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪರಿಚಯಾತ್ಮಕ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಶಹಾಬಾದ, ವಾಡಿ ಮತ್ತು ಮಳಖೇಡ ಭಾಗಗಳಲ್ಲಿ ಪ್ರಸಿದ್ಧ ಸುಣ್ಣದ ಕಲ್ಲು ನಿಕ್ಷೇಪಗಳು ಹೇರಳವಾಗಿರುವುದರಿಂದ, ಇಲ್ಲಿ ಏಷ್ಯಾದಲ್ಲೇ ಹೆಸರಾಂತ ಸಿಮೆಂಟ್ ಕಾರ್ಖಾನೆಗಳಾದ ಅಲ್ಟ್ರಾಟೆಕ್, ಎ.ಸಿ.ಸಿ., ಕೇಸೋರಾಮ್ ಕಾರ್ಯನಿರ್ವಹಿಸುತ್ತಿವೆ. ಇದು ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ. ಹಸಿರು ಕೈಗಾರಿಕೆಗಳ ಮೂಲಕ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ. ಪುನರುತ್ಪಾದಕ ಶಕ್ತಿ ಇಂಧನ ಸೌರ, ಗಾಳಿ, ಜಲಶಕ್ತಿ ಬಳಸಿ ಕೈಗಾರಿಕಾ ಉತ್ಪಾದನೆ ಹೆಚ್ಚಿಸುವುದು. ಆ ಮೂಲಕ ಸ್ಥಳೀಯ ಜನರಿಗೆ ತರಬೇತಿ ನೀಡಿ, ಪರಿಸರ ಸ್ನೇಹಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸುಸ್ಥಿರ ಅಭಿವೃದ್ಧಿ ಲಕ್ಷಣವಾಗಿದೆ ಎಂದು ಅವರು ತಿಳಿಸಿದರು.
ಉಪ ಪ್ರಾಚಾರ್ಯರಾದ ಗೀತಾ ಟಿ.ಆರ್. ಮಾತನಾಡಿ ಕಲಬುರಗಿ ಭಾರತ ಹಾಗೂ ಕರ್ನಾಟಕದ “ತೊಗರಿ ಕಣಜ” ಎಂದು ಕರೆಯಲಾಗುತ್ತದೆ. ಇಲ್ಲಿ ಬೆಳೆಯುವ ತೊಗರಿ ಭೌಗೋಳಿಕ ಸೂಚ್ಯಂಕ ಹೊಂದಿರುವುದರಿಂದ ತೊಗರಿ ಬೇಳೆಗೆ ಏಷ್ಯದಲ್ಲಿಯೇ ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಸುಮಾರು 65ಕ್ಕೂ ಹೆಚ್ಚು ತೊಗರಿ ಸಂಸ್ಕರಣ ಘಟಕಗಳು ಇಲ್ಲಿ ಕಾರ್ಯನಿರ್ವಹಿಸುವ ಮೂಲಕ ಸ್ಥಳೀಯ ಕಾರ್ಮಿಕ ವರ್ಗಕ್ಕೆ ಉದ್ಯೋಗ ಒದಗಿಸುತ್ತಿವೆ ಎಂದರು.
ಬೋಧಕರಾದ ಮಂಜುಳಾ ಪಾಟೀಲ್, ರುದ್ರಗೌಡ ಕೆ. ಬಿರಾದಾರ ಹಾಗೂ ಚನ್ನಬಸವಣ್ಣ ಅವರು ಸಹ ಮಾತನಾಡಿದರು. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಕರ್ನಾಟಕ ಕೇಂದ್ರದ ಡಾ. ಸಿದ್ದರಾಮ. ಹೆಚ್. ಎಮ್. ಅವರು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಗಾರದಲ್ಲಿ ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳ ಜೊತೆಗೆ ಜಿಲ್ಲಾ ತರಬೇತಿ ಸಂಸ್ಥೆಯ ಅಧಿಕಾರಿ ಸಿಬ್ಬಂದಿಗಳು ಸಹ ಭಾಗಿಯಾಗಿದ್ದರು. ರಂಗನಾಥ ನಿರೂಪಿಸಿದರು.





















