Home ಜಿಲ್ಲೆ ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ : ಮಹಾದೇವ ಬಿರಾದಾರ

ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ : ಮಹಾದೇವ ಬಿರಾದಾರ

ಅಥಣಿ : ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳು ಹಾಗೂ ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ, ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರೇಡ್ 2 ತಹಶೀಲ್ದಾರ ಮಹಾದೇವ ಬಿರಾದಾರ ತಿಳಿಸಿದ್ದಾರೆ.
ಅವರು ತಾಲೂಕಿನ ನದಿ ಇಂಗಳಗಾಂವ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ. ಯಾವುದೇ ಅರ್ಜಿಯನ್ನು ಅನಗತ್ಯವಾಗಿ ವಿಳಂಬ ಮಾಡದೆ, ಅದರ ಸ್ಥಿತಿಗತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರು ಸಲ್ಲಿಸುವ ಸಮಸ್ಯೆ ಹಾಗೂ ಕುಂದುಕೊರತೆಗಳ ಪ್ರತಿ ಅರ್ಜಿಗೆ ಸ್ವೀಕೃತಿ ಸಂಖ್ಯೆ ನೀಡಬೇಕು.ಸಾರ್ವಜನಿಕರಿಂದ ಸ್ವೀಕರಿಸಲಾದ ಪ್ರತಿಯೊಂದು ಅರ್ಜಿಗೂ ಮಹತ್ವ ನೀಡಬೇಕು. ಅರ್ಜಿಯಲ್ಲಿರುವ ಸಮಸ್ಯೆಯನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳಿದ್ದರೆ ನಿಯಮಾನುಸಾರ ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳಬೇಕು. ಯಾವುದೇ ಅರ್ಜಿಯ ವಿಲೇವಾರಿಯಲ್ಲಿ ಅನಗತ್ಯ ವಿಳಂಬವಾಗದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸೂಕ್ತ ಪರಿಹಾರ ಕಲ್ಪಿಸುವ ಪ್ರಜಾ ಸೇವೆ ಆಂದೋಲನವು ಸರ್ಕಾರದ ಆದೇಶದ ಮೇರೆಗೆ ನಡೆಯುತ್ತಿದ್ದು ಸಾರ್ವಜನಿಕರು ದಾಖಲೆ ಸಮೇತ ಅರ್ಜಿ ಸಲ್ಲಿಸಿ ತಮ್ಮ ಸಮ್ಯಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಗ್ರಾಮಸ್ಥರಿಂದ ಆಗ್ರಹ :
ಗ್ರಾಮದಲ್ಲಿ ಹದಗೆಟ್ಟಿರುವ ತೋಟದ ವಸತಿ ಪ್ರದೇಶದ ರಸ್ತೆಗಳನ್ನು ದುರಸ್ತಿ ಮಾಡಿ ಉತ್ತಮ ರಸ್ತೆ ನಿರ್ಮಿಸಬೇಕು ತೋಟದಲ್ಲಿರುವ ಮನೆಗಳನ್ನು ಗ್ರಾಮ ಪಂಚಾಯತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಸ್ಮಶಾನಕ್ಕೆ ಅಗತ್ಯ ಜಾಗ ಕಲ್ಪಿಸಬೇಕು, ಪ್ರವಾಹದ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ನೀಡಬೇಕು, ಕೃಷ್ಣಾ ನದಿ ದಡದಿಂದ ದಡಕ್ಕೆ ಸಾರ್ವಜನಿಕರಿಗಾಗಿ ಬೋಟ್ ವ್ಯವಸ್ಥೆ ಕಲ್ಪಿಸಬೇಕು, ಅಲ್ಲದೇ ತೋಟದ ವಸತಿ ಪ್ರದೇಶಗಳಿಗೂ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು, ರಸ್ತೆ ಬದಿಯಲ್ಲಿರುವ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಮಗದುಮ್ಮ, ಸಿದ್ದು ಲಾಂಡಗೆ, ಮಹಾಂತೇಶ ಬಂಡಗಾರ, ಗುರುರಾಜ ಸಂಪನ್ನವರ, ಪ್ರವೀಣ ಹುಣಸಿಕಟ್ಟಿ, ಲಕ್ಷ್ಮಣ ಜಾಧವ, ಮಲ್ಲಪ್ಪ ಮುಂಜಿ, ಸಂತೋಷ ಬಾಯನಾಯಿಕ, ಸಂತೋಷ ತಾಲಬೌಡಿ, ಚೇತನ ಗುರವ ಸೇರಿದಂತೆ ಇನ್ನಿತಿತರು ಉಪಸ್ಥಿತರಿದ್ದರು
ಗ್ರಾ.ಪಂ ಪಿಡಿಓ ಸಚಿನ ಪಾಟೀಲ ಸ್ವಾಗತಿಸಿದರು, ಮಹಾಂತೇಶ ಗೂಳಪ್ಪನ್ನವರ ನಿರೂಪಿಸಿ ವಂದಿಸಿದರು.