Home ಜಿಲ್ಲೆ ಯುವ ಸಂಸತ್‍ನಲ್ಲಿ ಮಹತ್ವದ ಚರ್ಚೆ

ಯುವ ಸಂಸತ್‍ನಲ್ಲಿ ಮಹತ್ವದ ಚರ್ಚೆ

ಬೀದರ್: ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಯುವ ಸಂಸತ್‍ನಲ್ಲಿ ವಿವಿಧ ವಿಷಯಗಳ ಮಹತ್ವದ ಚರ್ಚೆ ನಡೆಯಿತು.
ಸಂಸತ್‍ನಲ್ಲಿ ಪಾಲ್ಗೊಂಡಿದ್ದ ತಾಲ್ಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ನಡವಳಿಕೆ ನಿಯಮ 12 ಕಾರ್ಯ ಕಲಾಪಗಳ ಅನುಸಾರ ರೈತರ ಸಮಸ್ಯೆ ಮತ್ತು ಪರಿಹಾರ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಇತ್ಯಾದಿಗಳ ಕುರಿತು ಚರ್ಚೆ ನಡೆಸಿದರು. ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ವಿಧೇಯಕಗಳನ್ನು ಅಂಗೀಕರಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಸಂವಿಧಾನ ಪೀಠಿಕೆಯ ಸಾಮೂಹಿಕ ವಾಚನದೊಂದಿಗೆ ಯುವ ಸಂಸತ್ತು ಆರಂಭಗೊಂಡಿತು.
ತಹಶೀಲ್ದಾರ್ ರವೀಂದ್ರ ದಾಮಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಾಣಿಕಾವ್ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ, ತಾಲ್ಲೂಕು ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿ ಶಂಕರಯ್ಯ ಮಠ, ಆರ್.ವಿ. ಬಿಡಪ್ ಕಾನೂನು ಕಾಲೇಜು ಪ್ರಾಚಾರ್ಯ ಟಿ. ಮುನಿಯಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ರಿಜ್ವಾನ ಗಡ್ಕರಿ, ಕರ್ನಾಟಕ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ದಿಲೀಪ್, ಅಕ್ಕ ಮಹಾದೇವಿ ಕಾಲೇಜು ಪ್ರಾಚಾರ್ಯೆ ಮೀನಾ ಗಾಯಕವಾಡ್, ಸಿದ್ಧಾರ್ಥ ಕಾಲೇಜಿನ ಬಸವರಾಜ ಸ್ವಾಮಿ, ಗುರುನಾನಕ ಪದವಿ ಕಾಲೇಜಿನ ಜಿ.ಎನ್. ಮಠಪತಿ ಮತ್ತಿತರರು ಇದ್ದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಸಹಯೋಗದಲ್ಲಿ ಯುವ ಸಂಸತ್ತು ಹಮ್ಮಿಕೊಳ್ಳಲಾಗಿತ್ತು.