
ಡಾಲಿ ಧನಂಜಯ್ ಅಭಿನಯದ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಓ ಪುಟ್ಟಮಲ್ಲಿ ನೀ ಕೇಳು ಇಲ್ಲಿ’ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಯೂಟ್ಯೂಬ್ನಲ್ಲಿ 50 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿರುವ ಈ ಮಾಸ್ ಡ್ಯಾನ್ಸ್ ನಂಬರ್, ಇನ್ಸ್ಟಾಗ್ರಾಮ್ನಲ್ಲೂ ಜನಪ್ರಿಯವಾಗಿದ್ದು, 50 ಸಾವಿರಕ್ಕೂ ಹೆಚ್ಚು ರೀಲ್ಸ್ಗಳು ಈ ಹಾಡಿಗೆ ಮೂಡಿಬಂದಿವೆ.
ವಾಸುಕಿ ವೈಭವ್ ಸಂಗೀತ ಸಂಯೋಜಿಸಿರುವ ಹಾಡಿಗೆ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಧನಂಜಯ್ ಹಾಗೂ ರೀಷ್ಮಾ ನಾಣಯ್ಯ ಹಾಕಿರುವ ಹೆಜ್ಜೆಗಳು ಗಮನ ಸೆಳೆಯುತ್ತಿವೆ. ರಿಯಾಲಿಟಿ ಶೋಗಳಲ್ಲೂ ಹಾಡು ಜನಪ್ರಿಯವಾಗಿರುವುದು ಚಿತ್ರದ ಪ್ರಚಾರಕ್ಕೆ ಮತ್ತಷ್ಟು ಬಲ ನೀಡಿದೆ.
‘ಬಡವ ರಾಸ್ಕಲ್’ ಖ್ಯಾತಿಯ ಶಂಕರ್ ಗುರು ನಿರ್ದೇಶನದ ಚಿತ್ರವನ್ನು ಐರಾ ಫಿಲಂಸ್ನ ಚನ್ನರಾಜ್ ಬಿ. ಹಟ್ಟಿಹೊಳಿ, ಮೃಣಾಲ್ ಹಾಗೂ ರಾಯಲಾ ಸ್ಟುಡಿಯೋಸ್ನ ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಜಂಟಿಯಾಗಿ ನಿರ್ಮಿಸಿದ್ದಾರೆ. ಎ.ಜೆ. ಶೆಟ್ಟಿ ಹಾಗೂ ಎಸ್.ಕೆ. ರಾವ್ ಛಾಯಾಗ್ರಹಣವಿದೆ.
ಉಮಾಶ್ರೀ, ರಂಗಾಯಣ ರಘು, ಸಾಧುಕೋಕಿಲ, ನಾಗಭೂಷಣ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಸೇರಿದಂತೆ ದೊಡ್ಡ ತಾರಾಗಣವಿದೆ. ‘ಅಣ್ಣ ಫ್ರಮ್ ಮೆಕ್ಸಿಕೋ’ ಡಿಸೆಂಬರ್ 24ರಂದು ತೆರೆಗೆ ಬರಲಿದೆ.






















