Home ಸಿನೆಮಾ ‘ಬೇಲ್’ಗೆ ಶಿವಣ್ಣ ಆಂಥೆಮ್ ಕಿಕ್ ಗ್ರ್ಯಾಂಡ್ ರಿಲೀಸ್

‘ಬೇಲ್’ಗೆ ಶಿವಣ್ಣ ಆಂಥೆಮ್ ಕಿಕ್ ಗ್ರ್ಯಾಂಡ್ ರಿಲೀಸ್

ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಬೇಲ್’ ಚಿತ್ರದ ‘ಶಿವಣ್ಣ ಆಂಥೆಮ್’ ಲಿರಿಕಲ್ ಸಾಂಗ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ಅಕ್ಟೋಬರ್ 2ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ.

ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್ ಹಾಗೂ ಪವನ್ ಒಡೆಯರ್ ಚಿತ್ರದ ಹಿಂದಿನ ಭಾವನಾತ್ಮಕ ಅನುಭವಗಳನ್ನು ಹಂಚಿಕೊಂಡರು. ತಮ್ಮ ಚಿಕಿತ್ಸೆಯ ಕಠಿಣ ದಿನಗಳಲ್ಲೇ ಪವನ್ ಒಡೆಯರ್ ಹಾಗೂ ಅವರ ಪತ್ನಿ ಅಪೇಕ್ಷಾ ಕಥೆ ಹೇಳಿ ಸಿನಿಮಾ ಒಪ್ಪಿಸಿರುವುದನ್ನು ನೆನಪಿಸಿಕೊಂಡ ಶಿವಣ್ಣ, ಅವರ ನಂಬಿಕೆ ಮತ್ತು ಪ್ರೀತಿಯಿಂದ ಭಾವುಕರಾಗಿದ್ದಾಗಿ ಹೇಳಿದರು.

‘ಬೇಲ್’ ಕೇವಲ ತಮ್ಮ ಪಾತ್ರದ ಸಿನಿಮಾ ಅಲ್ಲ. ಚಿತ್ರದ ಪ್ರತಿಯೊಂದು ಪಾತ್ರವೂ ಕಥೆಗೆ ಜೀವ ತುಂಬಿದೆ ಎಂದು ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ದೀಕ್ಷಿತ್, ಸಂಜನಾ ಹಾಗೂ ಲೂಸ್ ಮಾದ ಯೋಗಿ ಅವರ ಅಭಿನಯದ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದರು.

ತಮ್ಮ ತಾಯಿಯ ನಿಧನದ ನೋವಿನ ನಡುವೆಯೂ ‘ಬೇಲ್’ ಚಿತ್ರೀಕರಣ ಮುಂದುವರಿಸಿದ ಸಂದರ್ಭವನ್ನು ನಿರ್ದೇಶಕ ಪವನ್ ಒಡೆಯರ್ ಭಾವುಕರಾಗಿ ನೆನಪಿಸಿಕೊಂಡರು. ಶಿವಣ್ಣ ಅವರ ಚೇತರಿಕೆಯ ಬಳಿಕ ತಕ್ಷಣವೇ ಚಿತ್ರೀಕರಣಕ್ಕೆ ಡೇಟ್ಸ್ ನೀಡಿದ್ದನ್ನು ಸ್ಮರಿಸಿದ ಅವರು, ಗೀತಾ ಶಿವರಾಜ್‌ಕುಮಾರ್ ಹಾಗೂ ನಿವೇದಿತಾ ಅವರಿಗೆ ಧನ್ಯವಾದ ಅರ್ಪಿಸಿದರು.

ಅಜನೀಶ್ ಲೋಕನಾಥ್ ಸಂಗೀತ, ವೈದಿ ಎಸ್. ಛಾಯಾಗ್ರಹಣ ಹಾಗೂ ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.