Home ಮುಖಪುಟ ಸುದ್ದಿ ರಸ್ತೆ ಅಗೆದು ಹಾಗೆ ಬಿಟ್ಟರೆ ಇಲಾಖೆಗಳ ವಿರುದ್ಧ ಕಠಿಣ ಕ್ರಮ

ರಸ್ತೆ ಅಗೆದು ಹಾಗೆ ಬಿಟ್ಟರೆ ಇಲಾಖೆಗಳ ವಿರುದ್ಧ ಕಠಿಣ ಕ್ರಮ

ಬೆಂಗಳೂರು, ಆ. ೨೮- ರಸ್ತೆ ಅಗೆದು ಕಾಮಗಾರಿ ಮುಗಿಸಿದ ಬಳಿಕ ಸರಿಯಾಗಿ ಮರುಸ್ಥಾಪನೆ ಮಾಡದೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿರುವ ವಿವಿಧ ಇಲಾಖೆಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಕಠಿಣ ನಿಲುವು ತಳೆದಿದೆ. ಇನ್ನು ಮುಂದೆ ನಗರ ಪಾಲಿಕೆಯ ಅಗತ್ಯ ಅನುಮತಿ ಪಡೆದ ಬಳಿಕವೇ ರಸ್ತೆ ಅಗೆದು ಕಾಮಗಾರಿ ಆರಂಭಿಸಬೇಕು ಎಂದು ಅಪರ ಆಯುಕ್ತೆ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಖಡಕ್ ಸೂಚನೆ ನೀಡಿದ್ದಾರೆ.


ಬೆಸ್ಕಾಂ, ಕೆಪಿಟಿಸಿಎಲ್, ಜಲಮಂಡಳಿ, ಬಿಎಂಆರ್‌ಸಿಎಲ್, ಗೇಲ್ ಹಾಗೂ ಒಎಫ್‌ಸಿ ಕೇಬಲ್ ಸಂಸ್ಥೆಗಳ ಅಧಿಕಾರಿಗಳೊಂದಿಗೆ ನಡೆದ ಸಮನ್ವಯ ಸಭೆಯಲ್ಲಿ ರಸ್ತೆ ಕತ್ತರಿಸಿದ ಬಳಿಕ ಸಕಾಲದಲ್ಲಿ ಮತ್ತು ಗುಣಮಟ್ಟದೊಂದಿಗೆ ಮರುಸ್ಥಾಪನೆ ಮಾಡುವ ಕುರಿತು ಚರ್ಚೆ ನಡೆಯಿತು.


ಒಂದೇ ರಸ್ತೆಯನ್ನು ಪದೇ ಪದೇ ಅಗೆಯುವುದಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ, ವಿದ್ಯುತ್ ಕೇಬಲ್, ನೀರು ಸರಬರಾಜು, ಒಳಚರಂಡಿ, ಗ್ಯಾಸ್ ಪೈಪ್‌ಲೈನ್ ಹಾಗೂ ಒಎಫ್‌ಸಿ ಕೇಬಲ್ ಅಳವಡಿಸುವ ಇಲಾಖೆಗಳು ಜಂಟಿಯಾಗಿ ಯೋಜನೆ ರೂಪಿಸಬೇಕು ಎಂದು ಸೂಚಿಸಲಾಗಿದೆ.


ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಪರ ಆಯುಕ್ತೆ, “ನಾವೆಲ್ಲರೂ ಯೂನಿಟಿ ಟೀಮ್ ಆಗಿ ಕೆಲಸ ಮಾಡಬೇಕು. ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಕಾಮಗಾರಿಗಳ ವಿಳಂಬಕ್ಕೆ ಯಾವುದೇ ಕಾರಣ ನೀಡುವಂತಿಲ್ಲ” ಎಂದು ತಾಕೀತು ಮಾಡಿದರು.


ಕಾಮಗಾರಿ ಸ್ಥಳಗಳಲ್ಲಿ ಕಡ್ಡಾಯ ಸುರಕ್ಷತೆ


ರಸ್ತೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಬ್ಯಾರಿಕೇಡ್, ಎಚ್ಚರಿಕೆ ಫಲಕ ಹಾಗೂ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ಬದಲಿ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ. ಪ್ರಮುಖ ರಸ್ತೆಗಳು, ಮೆಟ್ರೋ ನಿಲ್ದಾಣಗಳು, ಆಸ್ಪತ್ರೆಗಳು ಹಾಗೂ ಹೆಚ್ಚಿನ ಸಂಚಾರವಿರುವ ಪ್ರದೇಶಗಳಲ್ಲಿ ವಿಶೇಷ ಎಚ್ಚರಿಕೆಯಿಂದ ಕಾಮಗಾರಿ ನಡೆಸುವಂತೆ ನಿರ್ದೇಶನ ನೀಡಲಾಗಿದೆ.


ಕಾಮಗಾರಿ ಮುಗಿದ ಬಳಿಕ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಉಳಿಯುವ ಕಂಬ, ಕೊಳವೆ, ತಂತಿ, ಬಾಕ್ಸ್ ಸೇರಿದಂತೆ ಇತರೆ ವಸ್ತುಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು ಎಂದೂ ತಿಳಿಸಲಾಗಿದೆ.


ಯಮಲೂರು ಕೆಂಪಾಪುರ ಮಾರ್ಗದ ೭೦೦ ಮೀ. ಪೈಪ್‌ಲೈನ್ ಕಾಮಗಾರಿ


ಯಮಲೂರು ಕೆಂಪಾಪುರ ಮಾರ್ಗದಲ್ಲಿ ಜಲಮಂಡಳಿ ಕೈಗೊಳ್ಳಲಿರುವ ಸುಮಾರು ೭೦೦ ಮೀಟರ್ ಪೈಪ್‌ಲೈನ್ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಸೀಗೇಹಳ್ಳಿ ಮುಖ್ಯ ರಸ್ತೆಯಿಂದ ಬಸವನಪುರ ಮುಖ್ಯ ರಸ್ತೆಯವರೆಗೆ ಪೈಪ್‌ಲೈನ್ ಕಾಮಗಾರಿಗೆ ಅನುಮತಿ ನೀಡಲಾಗಿದ್ದು, ರಸ್ತೆ ಮರುಸ್ಥಾಪನೆ ಶುಲ್ಕವನ್ನು ಜಲಮಂಡಳಿಯೇ ಪಾವತಿಸಲಿದೆ.


ಇದೇ ವೇಳೆ ಹೊರವರ್ತುಲ ರಸ್ತೆಯ ಉಡುಪಿ ಸನ್ನಿಧಿ ಹೋಟೆಲ್ ಬಳಿ ಅನುಮತಿ ಇಲ್ಲದೆ ರಸ್ತೆ ಅಗೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಈಗಾಗಲೇ ಅಗೆದಿರುವ ರಸ್ತೆಯನ್ನು ಶೀಘ್ರ ಸರಿಪಡಿಸುವಂತೆ ನಿರ್ದೇಶಿಸಲಾಗಿದೆ.


ರಸ್ತೆ ಅಗೆದು ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡುವ ಕಾಮಗಾರಿಗಳಿಗೆ ಕಡಿವಾಣ ಹಾಕಿ, ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಉತ್ತಮ ರಸ್ತೆ ಮತ್ತು ಸುಗಮ ಸಂಚಾರಕ್ಕೆ ಪೂರ್ವ ನಗರ ಪಾಲಿಕೆ ಮುಂದಾಗಿದೆ.