ಕಲಬುರಗಿ: ಸಂಸ್ಕೃತ ಭಾಷೆಯ ಅಧ್ಯಯನವು ವಿದ್ಯಾರ್ಥಿಗಳಲ್ಲಿ ಉತ್ತಮ ಚಿಂತನೆ, ಶಿಸ್ತು, ವಿನಯ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ. ಸಂಸ್ಕೃತ ಕಲಿಯುವುದು ಕೇವಲ ಭಾಷೆಯ ಜ್ಞಾನ ಸಂಪಾದಿಸುವುದಕ್ಕೆ ಸೀಮಿತವಾಗದೆ, ಸಂಸ್ಕಾರ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಎಂದು ಪತ್ರಕರ್ತ ರಾಚಪ್ಪಾ ಜಂಬಗಿ ಹೇಳಿದರು.
ನಗರದ ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎ., ಬಿ.ಕಾಂ. ಮತ್ತು ಬಿ.ಎಸ್ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಂಸ್ಕೃತ ಕಲಿಯೋಣ,ಸಂಸ್ಕಾರ ಬೆಳೆಸೋಣ,ಸಂಸ್ಕೃತ ಭಾಷಾ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು,ಸಂಸ್ಕೃತ ಸಾಹಿತ್ಯದಲ್ಲಿರುವ ಸುಭಾಷಿತಗಳು,ನೀತಿಕಥೆಗಳು ಮತ್ತು ಮಹಾಕಾವ್ಯಗಳು ವಿದ್ಯಾರ್ಥಿಗಳಿಗೆ ಜೀವನಮೌಲ್ಯಗಳನ್ನು ತಿಳಿಸಿಕೊಡುವುದರ ಜೊತೆಗೆ ಉತ್ತಮ ನಡವಳಿಕೆ ಹಾಗೂ ಸಕಾರಾತ್ಮಕ ಚಿಂತನೆಬೆಳೆಸಲು ನೆರವಾಗುತ್ತವೆ ಎಂದರು.
ವೇದ,ಉಪನಿಷತ್ತು,ಭಗವದ್ಗೀತೆ ಸೇರಿದಂತೆ ಪ್ರಾಚೀನ ಭಾರತೀಯ ಸಾಹಿತ್ಯದ ಜ್ಞಾನವನ್ನು ಅರಿಯಲು ಸಂಸ್ಕೃತವು ಪ್ರಮುಖ ಸೇತುವೆಯಾಗಿದೆ.ಭವಿಷ್ಟ್ರದ ಯುವ ಪೀಳಿಗೆ ಸಂಸ್ಕೃತ ಭಾಷೆಯ ಮಹತ್ವ ಅರಿತುಕೊಂಡು, ಅದರ ಅಧ್ಯಯನಕ್ಕೆ ಆಸಕ್ತಿ ಬೆಳೆಸಿಕೊಳ್ಳಬೇಕು. ಭಾಷೆಯ ಕಲಿಕೆಯು ಕೇವಲ ಜ್ಞಾನಾರ್ಜನೆಗೆ ಸೀಮಿತವಾಗದೆ, ಉತ್ತಮ ಚಿಂತನೆ,ಶಿಸ್ತು, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಬೇಕು. ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಿಳಿದುಕೊಂಡು, ಅವುಗಳಲ್ಲಿರುವ ಉತ್ತಮ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಖಂಡೇರಾವ್ ಕುಲಕರ್ಣಿ ಅವರು ಮಾತನಾಡಿ, ಸಂಸ್ಕೃತ ಭಾಷೆಯು ಭಾರತದ ಪ್ರಾಚೀನ ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಮುಖ ಮಾಧ್ಯಮವಾಗಿದೆ.ವೇದಗಳು,ಉಪನಿಷತ್ತುಗಳು, ಪುರಾಣಗಳು ಹಾಗೂ ಅನೇಕ ಅಮೂಲ್ಯ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿದ್ದು,ಅವುಗಳ ಅಧ್ಯಯನದಿಂದ ಭಾರತೀಯ ಚಿಂತನೆ ಮತ್ತು ಸಂಸ್ಕೃತಿಯ ಆಳವನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶರಣು ಎಸ್. ಪಾಟೀಲ್,ಕಾಲೇಜಿನ ಅಧ್ಯಕ್ಷ ಸಂದೀಪ್ ದೇಸಾಯಿ,ಕಾರ್ಯದರ್ಶಿ ಜಗನ್ನಾಥ ನಾಗೂರ ಹಾಗೂ ಪ್ರಾಂಶುಪಾಲ ನಾಗರಾಜ ಪಟ್ಟಣಕರ, ಮಂಜುನಾಥ ಬನ್ನೂರ,ಡಿ.ಪಿ.ಸಜ್ಜನ,ಶ್ರೀದೇವಿ ಹೀರೆಮಠ, ಗುರುಬಾಯಿ ಸಾಹುವಾಡಿ,ಸುರೇಖಾ,ಪೂಜಾ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಪಂಚ ಪರಿವರ್ತನೆ ಪರಿಕಲ್ಪನೆಗೆ ಒತ್ತು ನೀಡಬೇಕಿದೆ.ಸಾಮಾಜಿಕ ಸಾಮರಸ್ಯ,ಕುಟುಂಬ ಪ್ರಬೋಧನ,ಪರಿಸರ ಸಂರಕ್ಷಣೆ,ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಕರ್ತವ್ಯ ಎಂಬ ಐದು ಪ್ರಮುಖ ಪರಿವರ್ತನೆಗಳು ವ್ಯಕ್ತಿ ಮತ್ತು ಕುಟುಂಬದ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಗುರಿ ಹೊಂದಿದೆ.
ರಾಚಪ್ಪಾ ಜಂಬಗಿ
ಪತ್ರಕರ್ತ,ಕಲಬುರಗಿ





















