
ಬೀದರ್: ನಗರದ ಹೊರ ವಲಯದಲ್ಲಿರುವ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯೋತ್ಸವ ಹಾಗೂ ಅಕಾಡೆಮಿಯ 12ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.
ಅಕಾಡೆಮಿಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ ವಿಮಲಾ ಶರಣಪ್ಪ ಸಿಕೆನಪುರೆ, ಮುಖ್ಯ ಅತಿಥಿ ನಿವೃತ್ತ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯಾಯ ಹಾಗೂ ಅಕಾಡೆಮಿಯ ನಿರ್ದೇಶಕ ಡಾ. ರಘು ಕೃಷ್ಣಮೂರ್ತಿ ಅವರು ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ ನಡೆಯಿತು. ಕರಿಯಪ್ಪ, ತಿಮ್ಮಯ್ಯ, ಮಾಣೆಕ್ಷಾ ಹಾಗೂ ಸುಂದರ್ಜಿ ತಂಡಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಸ್ತು ಬದ್ಧ ಪಥ ಸಂಚಲನ ನಡೆಸಿ ಗಮನ ಸೆಳೆದರು. ಮೊದಲ ಬಾರಿಗೆ ಶಾಲಾ ಬ್ಯಾಂಡ್ ತಂಡ ಪಥ ಸಂಚಲನದಲ್ಲಿ ಭಾಗವಹಿಸಿತ್ತು.
ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರು ಹಾಗೂ ವೀರ ನಾರಿಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ಸಂಸ್ಕøತಿ ಹಾಗೂ ಯಕ್ಷಗಾನದ ವೈಭವ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಗ್ರಾಮೀಣ ಮಕ್ಕಳ ಪ್ರತಿಭೆ ಗುರುತಿಸುವುದೇ ಗುರಿ: ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಲ್ ಶರಣಪ್ಪ ಸಿಕೆನಪುರೆ, ‘ಸೈನ್ಯದಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ ಬಳಿಕ ಗ್ರಾಮೀಣ ಭಾಗದ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕು ಎಂಬ ಕನಸಿನೊಂದಿಗೆ ಅಕಾಡೆಮಿಯನ್ನು ಸ್ಥಾಪಿಸಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಶಿಸ್ತು, ಆತ್ಮ ವಿಶ್ವಾಸ, ದೈಹಿಕ ಸಾಮಥ್ರ್ಯ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
‘ವಿದ್ಯಾರ್ಥಿಗಳು ಕೇವಲ ಪಠ್ಯ ಶಿಕ್ಷಣಕ್ಕೆ ಸೀಮಿತವಾಗದೆ ಕ್ರೀಡೆ, ತಂತ್ರಜ್ಞಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು. ಉತ್ತಮ ವ್ಯಕ್ತಿತ್ವ ಹೊಂದಿದ ಆದರ್ಶ ನಾಗರಿಕರಾಗಿ ರೂಪುಗೊಳ್ಳಬೇಕು’ ಎಂದು ಆಶಿಸಿದರು.
ದೃಢ ಸಂಕಲ್ಪದಿಂದ ಸಾಧನೆ ಸಾಧ್ಯ: ಮುಖ್ಯ ಅತಿಥಿಯಾಗಿ ನಿವೃತ್ತ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯಾಯ ಮಾತನಾಡಿ, ‘ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಲು ಪೂರ್ವಯೋಜನೆ, ಧೈರ್ಯ ಮತ್ತು ದೃಢಸಂಕಲ್ಪ ಅಗತ್ಯ. ಕರ್ನಲ್ ಶರಣಪ್ಪ ಸಿಕೆನಪುರೆ ಅವರು ತಮ್ಮ ಕನಸನ್ನು ಸಾಕಾರಗೊಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.
ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆ, ಬಸವಣ್ಣನವರ ಕಾಯಕ ತತ್ವ ಹಾಗೂ ಸಂವಿಧಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಮಾಜಿ ಸೈನಿಕರು ಎದುರಿಸುವ ಕಾನೂನು ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಹರಿಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಿದರು.
ಶೂಟಿಂಗ್ನಲ್ಲಿ ವಿದ್ಯಾರ್ಥಿಗಳ ಸಾಧನೆ: ಅಕಾಡೆಮಿಯ ವಿದ್ಯಾರ್ಥಿಗಳು 2025-26ನೇ ಸಾಲಿನ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ 14 ಪದಕಗಳನ್ನು ಹಾಗೂ ಕಲಬುರಗಿಯಲ್ಲಿ ನಡೆದ ದಸರಾ ಉತ್ಸವದ ಸ್ಪರ್ಧೆಯಲ್ಲಿ 9 ಪದಕಗಳನ್ನು ಗಳಿಸಿರುವುದನ್ನು ಸ್ಮರಿಸಿ ಸಾಧಕ ವಿದ್ಯಾರ್ಥಿಗಳನ್ನು ಇಲ್ಲಿ ಸನ್ಮಾನಿಸಲಾಯಿತು.
ರೋಬೋಟಿಕ್ಸ್ ತರಬೇತಿಯ ಶಿಕ್ಷಕಿ ಶೈಲಜಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ದೃಷ್ಟಿದೋಷ ಹೊಂದಿರುವವರ ಸುರಕ್ಷಿತ ಸಂಚಾರಕ್ಕೆ ನೆರವಾಗುವ ‘ಸ್ಮಾರ್ಟ್ ಬ್ಲೈಂಡ್ ಸ್ಟಿಕ್’ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ವಿದ್ಯಾರ್ಥಿಗಳ ವೈಜ್ಞಾನಿಕ ಆವಿಷ್ಕಾರ ಹಾಗೂ ತಾಂತ್ರಿಕ ಕೌಶಲ ಗಮನ ಸೆಳೆಯಿತು.
ಇದೇ ಸಂದರ್ಭದಲ್ಲಿ ಅಕಾಡೆಮಿಯಲ್ಲಿ ನೂತನವಾಗಿ ಅಳವಡಿಸಲಾದ ಲಿಫ್ಟನ್ನು ಗಣ್ಯರು ಉದ್ಘಾಟಿಸಿದರು.
ಅಕಾಡೆಮಿಯ ಪ್ರಾಂಶುಪಾಲೆ ರೇಣು ಸಿಂಗ್ ಪಠಾಣೆ ವಂದಿಸಿದರು. ಪಿ.ಆರ್.ಒ ಕಾರಂಜಿ ಸ್ವಾಮಿ, ಮುಖ್ಯ ಗುರು ಜ್ಯೋತಿ ರಾಗಾ, ಮಾಜಿ ಸೈನಿಕರಾದ ಸುಬೇದಾರ್ ಮಡೆಪ್ಪ, ಸುಬೇದಾರ್ ರಾಮ ದಾವಲಜಿ, ಸುಬೇದಾರ್ ಧನರಾಜ ಸಾವರೆ, ಚಂದ್ರಶೇಖರ ಮಠಪತಿ, ಅಕಾಡೆಮಿಯ ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





















