Home ಜಿಲ್ಲೆ ಕಲಬುರಗಿ ಕೊಲೆ ಪ್ರಕರಣ: ಪತ್ನಿ, ಪ್ರಿಯಕರ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕೊಲೆ ಪ್ರಕರಣ: ಪತ್ನಿ, ಪ್ರಿಯಕರ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕಲಬುರಗಿ,ಅ.8: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಂದ ಪ್ರಕರಣದಲ್ಲಿ ಪತ್ನಿ, ಪ್ರಿಯಕರ ಸೇರಿದಂತೆ ನಾಲ್ವರು ಅಪರಾಧಿಗಳಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ರೂ.2.39 ಲಕ್ಷ ದಂಡ ವಿಧಿಸಿ ಆದೇಶಿಸಿದೆ.
ಚಿಂಚೋಳಿ ತಾಲ್ಲೂಕಿನ ಕುಡ್ಡಳ್ಳಿ ಗ್ರಾಮದಲ್ಲಿ 2022ರ ಆಗಸ್ಟ್ 5ರಂದು ಕೊಲೆಯಾಗಿದ್ದ ರಾಮಣ್ಣ ಗೋಟೂರ ಅವರ ಪತ್ನಿ ಸುನೀತಾ ಗೋಟೂರ,ಪ್ರಿಯಕರ ಮಲ್ಲಪ್ಪ ಪೂಜಾರಿ, ಅವರಿಗೆ ನೆರವು ನೀಡಿದ್ದ ಸಾಬಣ್ಣ ಪೂಜಾರಿ ಹಾಗೂ ಬಸಪ್ಪ ಗೋಟೂರ ಶಿಕ್ಷೆಗೆ ಒಳಗಾದವರು.
ರಾಮಣ್ಣ ಹಾಗೂ ಮಲ್ಲಪ್ಪ ಪರಸ್ಪರ ಸ್ನೇಹಿತರು. ರಾಮಣ್ಣನ ಮನೆಗೆ ಹೋಗುತ್ತಿದ್ದ ಮಲ್ಲಪ್ಪ ಕ್ರಮೇಣ ರಾಮಣ್ಣನ ಪತ್ನಿ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದ. ಈ ವಿಷಯ ರಾಮಣ್ಣನಿಗೆ ತಿಳಿದಾಗ ರಾಜಿ ಪಂಚಾಯಿತಿಯೂ ನಡೆದಿತ್ತು. ಈ ನಡುವೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ರಾಮಣ್ಣನ ಕೊಲೆಗೆ ಮಲ್ಲಪ್ಪ ಹಾಗೂ ಸುನೀತಾ ನಿರ್ಧರಿಸಿದ್ದರು. ಅದರಂತೆ ಒಂದು ದಿವಸ ತಡರಾತ್ರಿ ರಾಮಣ್ಣ ಮಲಗಿದ್ದಾಗ ಸುನೀತಾ ಅವರೇ ಎದ್ದು ಬಾಗಿಲು ತೆಗೆದು ಮಲ್ಲಪ್ಪ, ಸಾಬಣ್ಣ ಹಾಗೂ ಬಸಪ್ಪ ಅವರನ್ನು ಮನೆಯೊಳಗೆ ಬಿಟ್ಟುಕೊಂಡಿದ್ದರು. ಬಳಿಕ ಆ ಮೂವರು ಸೇರಿ ಕೊಲೆ ಮಾಡಿದ್ದರು.
ಈ ನಡುವೆ ರಾಮಣ್ಣನ ಮಕ್ಕಳು ಎಚ್ಚರಗೊಂಡಿದ್ದರು. ಅವರನ್ನು ತಾಯಿ ಸುನೀತಾ ಅವರೇ ಬೇರೊಂದು ಕೊಠಡಿಯಲ್ಲಿ ಕೂಡಿಹಾಕಿದ್ದರು. ಕೊಲೆ ಬಳಿಕ ಶವ ಸಾಗಿಸುವಾಗ ರಾಮಣ್ಣನ ಮಕ್ಕಳಲ್ಲಿ ಒಬ್ಬ ತಪ್ಪಿಸಿಕೊಂಡು ಅವರ ದೊಡ್ಡಪ್ಪನಿಗೆ ವಿಷಯ ಮುಟ್ಟಿಸಿದಾಗ ವಿಷಯ ಬೆಳಕಿಗೆ ಬಂದಿತ್ತು. ಈ ಕುರಿತು ಚಿಂಚೋಳಿ ತಾಲ್ಲೂಕಿನ ಸುಲೇಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಸಿಪಿಐ ಜಗದೀಶ ಕೆ.ಜಿ. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ್ದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೇಡಂ ಪೀಠದ ನ್ಯಾಯಾಧೀಶ ಸಿರಾಜುದ್ದೀನ್ ಎ. ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ರೂ.2.39 ಲಕ್ಷ ದಂಡದ ಮೊತ್ತದಲ್ಲಿ ತಲಾ ರೂ.1 ಲಕ್ಷವನ್ನು ರಾಮಣ್ಣ ಅವರ ಇಬ್ಬರು ಮಕ್ಕಳಿಗೆ ಪರಿಹಾರವಾಗಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ ಆರ್ ನಾಗರಾಜ ಮಸ್ಕಿ ಅವರು ವಾದ ಮಂಡಿಸಿದ್ದರು.