
ಮಧುಗಿರಿ, ಜೂ. ೨೬- ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಐಐಟಿ ಮದ್ರಾಸ್ ಸಹಭಾಗಿತ್ವದಲ್ಲಿ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನನಸು ಮಾಡುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ಶಾಲೆಯ ಅಧ್ಯಕ್ಷ ಹನುಮಂತರಾಜು ಹೇಳಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಶ್ರೀರಂಗ ವಿದ್ಯಾಮಂದಿರ ಶಾಲೆಯಲ್ಲಿ ಅಕ್ಷರಾಭ್ಯಾಸ ಹಾಗೂ ಅಧಿಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರ ಸಮ್ಮುಖದಲ್ಲಿ ಸನಾತನ ಸಂಪ್ರದಾಯದಂತೆ ಅಕ್ಷರಾಭ್ಯಾಸ ಹಮ್ಮಿಕೊಳ್ಳಲಾಗಿದೆ. ವಿಘ್ನೇಶ್ವರನ ಅನುಗ್ರಹದೊಂದಿಗೆ ಪುಟಾಣಿ ಮಕ್ಕಳಿಗೆ ವಿದ್ಯಾರಂಭ ಮಾಡಲಾಗಿದೆ ಎಂದರು.
ಶಾಲೆಯ ಗೌರವಾಧ್ಯಕ್ಷ ಶಿವಕುಮಾರ್ ಮಾತನಾಡಿ, ಶಾಲೆಯ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪೋಷಕರ ಸಹಕಾರ ಅಗತ್ಯ ಎಂದರು.
ಅಣುಕು ಸಂಸತ್ ಮಾದರಿಯಲ್ಲಿ ಶಾಲಾ ಹಂತದ ಚುನಾವಣೆ ನಡೆಸಿ, ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷರು, ಉಪಾಧ್ಯಕ್ಷರು, ಶಿಸ್ತು ಸಮಿತಿ, ಸಾಂಸ್ಕೃತಿಕ ಸಮಿತಿ, ಕ್ರೀಡಾ ಹಾಗೂ ಶೈಕ್ಷಣಿಕ ಸಮಿತಿಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಯ ಕಾರ್ಯದರ್ಶಿ ಮಮತಾ ಟಿ.ಆರ್. ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಅಜೀಜ್ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿ ಮಂಜುನಾಥ್, ನಿರ್ದೇಶಕರಾದ ಶ್ರೀಕುಮಾರ್, ರಂಗನಾಥ್, ಮುಖ್ಯ ಶಿಕ್ಷಕಿ ಸಫಿನಾ ಮತ್ತಿತರರು ಉಪಸ್ಥಿತರಿದ್ದರು.
























