
‘ಫಾದರ್ಸ್ ಡೇ’ ಟ್ರೇಲರ್‌ಗೆ ಭರ್ಜರಿ ಪ್ರತಿಕ್ರಿಯೆ
ತಂದೆ–ಮಗನ ಬಾಂಧವ್ಯದ ಸುತ್ತ ಹೆಣೆದಿರುವ ‘ಫಾದರ್ಸ್ ಡೇ’ ಚಿತ್ರದ ಟ್ರೇಲರ್ ಫಾದರ್ಸ್ ಡೇ ವಿಶೇಷವಾಗಿ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಭಾವನಾತ್ಮಕ ಕಥಾಹಂದರ, ಸಾಹಸಮಯ ಬೈಕ್ ಪಯಣ ಹಾಗೂ ಕುತೂಹಲಭರಿತ ನಿರೂಪಣೆಯ ಮೂಲಕ ಟ್ರೇಲರ್ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಇಲೆವೆನ್ ಎಲಿಮೆಂಟ್ಸ್ ಸಂಸ್ಥೆಯಡಿ ರಾಜಾರಾಮ್ ರಾಜೇಂದ್ರನ್ ನಿರ್ಮಿಸಿ ನಿರ್ದೇಶಿಸಿರುವ ಈ ಚಿತ್ರ ಕನ್ನಡದ ಮೊದಲ ಬೈಕರ್ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಟ್ರೇಲರ್ ಬಿಡುಗಡೆ ಅಂಗವಾಗಿ ಬೆಂಗಳೂರಿನಲ್ಲಿ ಟ್ರಿಂಪ್ ಮೋಟಾರ್ ಸೈಕಲ್ ಸಹಯೋಗದಲ್ಲಿ ವಿಶೇಷ ಬೈಕ್ ರೈಡ್ ಆಯೋಜಿಸಲಾಗಿತ್ತು. ಚಿತ್ರದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
‘ಆಚಾರ್ & ಕೋ’, ‘ಸಪ್ತಸಾಗರದಾಚೆ ಎಲ್ಲೋ’ ಮತ್ತು ‘ಅನಾಮಧೇಯ ಅಶೋಕ್ ಕುಮಾರ್’ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಹರ್ಷಿಲ್ ಕೌಶಿಕ್ ಹಾಗೂ ‘ಶ್ರೀರಸ್ತು ಶುಭಮಸ್ತು’ ಸೇರಿದಂತೆ ಹಲವು ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಅಜಿತ್ ಹಂದೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹೆಸರಾಂತ ಗಾಯಕ ಆಲ್ ಓಕೆ ಸಾಮ್ರಾಗ್ನಿ ರಾಜನ್, ಕ್ಷೇಮ ಶೆಟ್ಟಿ ಹಾಗೂ ಬಾಸ್ಕಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇಬ್ಬರು ಬೈಕರ್‌ಗಳ ಪಯಣದ ಸುತ್ತ ಸಾಗುವ ಕಥೆಯಲ್ಲಿ ಸಹಪ್ರಯಾಣಿಕರ ನಡುವಿನ ಸಂಬಂಧ, ಭಾವನೆಗಳು ಮತ್ತು ಬದುಕಿನ ಅನಿರೀಕ್ಷಿತ ತಿರುವುಗಳನ್ನು ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಪ್ರೇಕ್ಷಕರು ಊಹಿಸದ ಕ್ಲೈಮ್ಯಾಕ್ಸ್ ಕೂಡ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.
ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ರಾಜಾರಾಮ್ ರಾಜೇಂದ್ರನ್ ಅವರೇ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಟ್ರೇಲರ್ ಚಿತ್ರದ ಕುರಿತ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಜ್ಯೋಲ್ಸ್ನಾ ಪ್ಯಾನಿಕರ್ ಸಂಕಲನ, ಜೋ ಪ್ಯಾನಿಕರ್ ಸಂಗೀತ ನಿರ್ದೇಶನ ಹೊಂದಿರುವ ಈ ಚಿತ್ರಕ್ಕೆ ನಿಧಿ ಜೋಶಿ ಕ್ರಿಯೇಟಿವ್ ನಿರ್ಮಾಪಕರಾಗಿ ಹಾಗೂ ಅವಿನಾಶ್ ಡ್ಯಾನಿಯಲ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.























