Home ಜಿಲ್ಲೆ ಬೆಂಗಳೂರು ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ

ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ

ದೇವನಹಳ್ಳಿ ಜೂ೨೬ : ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿದ್ದು,ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲ ಸೌಲಭ್ಯಗಳು ಅವರ ಬದುಕಿನಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸುತ್ತಿವೆ ಎಂದು ಶ್ರೀ ವಾಲ್ಮೀಕಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಬಿದಲೂರು ಮುನಿಕೃಷ್ಣಪ್ಪ ಹೇಳಿದರು.


ಪಟ್ಟಣದ ಶ್ರೀ ವಾಲ್ಮೀಕಿ ಗ್ರಾಮೀಣ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗುತ್ತಿದ್ದು, ಸಹಕಾರ ಸಂಘಗಳಿಂದ ದೊರೆಯುವ ಸುಲಭ ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು.ಮಹಿಳೆಯರ ಉದ್ಯಮಶೀಲತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಘವು ನಿರಂತರವಾಗಿ ಬೆಂಬಲ ನೀಡುತ್ತಿದೆ.ಸದಸ್ಯರ ಸಹಕಾರದಿಂದ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಬದ್ಧರಾಗಿದ್ದೇವೆ. ಅಲ್ಲದೆ, ಯುವಜನರಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆಯನ್ನೂ ಸಂಘದ ವತಿಯಿಂದ ಕಲ್ಪಿಸಲಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ವಿವಿಧ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಫಲಾನುಭವಿಗಳು ಸಂಘದ ಕಾರ್ಯವನ್ನು ಶ್ಲಾಘಿಸಿ, ಈ ಸಾಲ ಸೌಲಭ್ಯ ತಮ್ಮ ಆರ್ಥಿಕ ಚಟುವಟಿಕೆಗಳಿಗೆ ಹೊಸ ಉತ್ತೇಜನ ನೀಡಲಿದೆ ಎಂದು ಸಂತಸ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ಮಹೇಶ್, ನಿರ್ದೇಶಕರಾದ , ಶ್ರೀನಿವಾಸ್, ವೀರಭದ್ರಪ್ಪ ,ನವೀನ್ ಕುಮಾರ್, ತಿಮ್ಮರಾಜು.ನಾರಾಯಣಸ್ವಾಮಿ, ಮನೋಜ್, ಮಾಚಪ್ಪ, ಲೋಕೇಶ್, ರಾಯಸಂದ್ರ ನವೀನ್, ರೇಣುಕಾ, ಕಾರ್ಯನಿರ್ವಹಣಾಧಿಕಾರಿ ಮಹೇಶ್ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.