Home ಜಿಲ್ಲೆ ತುಮಕೂರು ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಕಾಲ್ನಡಿಗೆ ಜಾಥಾ

ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಕಾಲ್ನಡಿಗೆ ಜಾಥಾ

ತಿಪಟೂರು, ಜೂ. ೨೬- ಖಾತೆದಾರರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆ ಹೋರಾಟ ಸಮಿತಿ, ಬಗರ್ ಹುಕುಂ ಹೋರಾಟ ಸಮಿತಿ, ಬೆಲೆ ಕಾವಲು ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಯಿತು.


ಕಿಬ್ಬನಹಳ್ಳಿ ಹೋಬಳಿಯ ಈರಲೆಗೆರೆ ಗ್ರಾಮದಿಂದ ಆರಂಭವಾದ ಜಾಥಾ, ಸುಮಾರು ೧೩ ಕಿಲೋಮೀಟರ್ ದೂರವನ್ನು ೧೫ ಕ್ಕೂ ಹೆಚ್ಚು ಗ್ರಾಮದ ಸಾವಿರಾರು ರೈತರು ಹಾಗೂ ರೈತ ಮುಂಖಡರು ಕಾಲ್ನಡಿಗೆಯಲ್ಲಿ ಕ್ರಮಿಸಿ ತಾಲ್ಲೂಕು ಆಡಳಿತ ಸೌಧದವರೆಗೆ ಸಾಗಿ, ಆಡಳಿತ ಸೌಧದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆಯ ಕ್ರಮಗಳನ್ನು ಖಂಡಿಸಿ, ರೈತರ ಹಕ್ಕುಗಳನ್ನು ರಕ್ಷಿಸುವಂತೆ ಸರ್ಕಾರವನ್ನು ಆಗ್ರಹಿಸಿ, ಉಪವಿಭಾಗಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.


ಪ್ರತಿಭಟನೆಯಲ್ಲಿ ರೈತರಿಗೆ ನೀಡಲಾಗಿದ್ದ ನೊಟೀಸ್ ಪತ್ರಗಳನ್ನು ಉಪವಿಭಾಗಧಿಕಾರಿಗಳ ಸಮ್ಮಖದಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.


ರೈತ ಸಂಘಟನೆಗಳು ಅರಣ್ಯ ಇಲಾಖೆ ರೈತರಿಗೆ ನೀಡಿರುವ ಎಲ್ಲಾ ನೋಟಿಸ್‌ಗಳನ್ನು ತಕ್ಷಣ ಹಿಂಪಡೆಯಬೇಕು. ಸಾಗುವಳಿ ಮಾಡುತ್ತಿರುವ ರೈತರ ಭೂ ಹಕ್ಕುಗಳನ್ನು ಕಾನೂನುಬದ್ಧವಾಗಿ ಮಾನ್ಯಗೊಳಿಸಬೇಕು. ರುದ್ರಾಪುರ ಸರ್ವೆ ನಂ.೧೧೪ಕ್ಕೆ ಸಂಬಂಧಿಸಿದ ಉಪವಿಭಾಗಾಧಿಕಾರಿಗಳ ಆದೇಶವನ್ನು ವಾಪಸ್ ಪಡೆಯಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಶಾಶ್ವತ ಹಕ್ಕುಪತ್ರ ನೀಡಬೇಕು. ರೈತರ ಮೇಲಿನ ದೌರ್ಜನ್ಯ ಮತ್ತು ಬೆದರಿಕೆಗಳನ್ನು ನಿಲ್ಲಿಸಬೇಕು. ಪ್ರಕೃತಿ ವಿಕೋಪದಿಂದ ಬೆಳೆಹಾನಿಗೊಳಗಾದ ರೈತರಿಗೆ ವೈಜ್ಞಾನಿಕ ಆಧಾರದ ಮೇಲೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಲಾಯಿತು.


ಪ್ರತಿಭಟನಾಕಾರನನ್ನುದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕೀಯ ಮಂಡಳಿಯ ಸದಸ್ಯ ಕೆ.ಟಿ.ಗಂಗಾಧರ್ ಮಾತನಾಡಿ, ಹಲವು ದಶಕಗಳಿಂದ ಸರ್ಕಾರಿ ಹಾಗೂ ಅರಣ್ಯದಂಚಿನ ಭೂಮಿಯನ್ನು ಹಸನು ಮಾಡಿ ಕೃಷಿಯೋಗ್ಯ ಭೂಮಿಯನ್ನಾಗಿ ರೂಪಿಸಿರುವ ಬಡ ರೈತರು ತಮ್ಮ ಭೂ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ಬದುಕುವಂತಾಗಿದೆ. ಆದರೆ ಅಂದು ಭೂಮಿಗೆ ಬೆಲೆಯಿಲ್ಲದ ಸ್ಥಿತಿಯಲ್ಲಿದ್ದಾಗ ಯಾರು ಸಹ ಕೇಳಲಿಲ್ಲ ಆದರೆ ಇಂದು ಭೂಮಿಯ ಬೆಲೆ ದುಪ್ಪಟ್ಟವಾಗಿರುವುದರಿಂದ ರೈತರ ಮೇಲೆ ದೌರ್ಜನ್ಯ ಎಸುಗುತ್ತಿರುವುದು ಖಂಡನೀಯ ಎಂದರು.


ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿಯವರು ಹಣ ಪಡೆದು ಕಾಂಗ್ರೇಸ್‌ಗೆ ಮತ ಚಲಾಯಿಸಬಹುದು ಆದರೆ ನಮ್ಮ ಭೂಮಿಗಳ ಹಕ್ಕುಪತ್ರಗಳನ್ನು ನೀಡಿ ಎಂದು ಪ್ರಶ್ನಿಸಿದರೆ ಕಾನೂನುಗಳು ಅಡ್ಡ ಬರುತ್ತವೆ ಎಂದು ಸರ್ಕಾರವನ್ನು ಟೀಕಿಸಿದರು.


ಕಿಬ್ಬನಹಳ್ಳಿ ಹೋಬಳಿಯ ಕಾಗೇಹಳ್ಳ ಕಾವಲು, ಹಾಲ್ಕುರಿಕೆಯ ಅಮೃತಮಹಲ್ ಕಾವಲು, ರುದ್ರಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸರ್ಕಾರವೇ ೧೯೬೦-೭೦ರ ಅವಧಿಯಲ್ಲಿ ಮಾಜಿ ಸೈನಿಕರಿಗೆ ಭೂಮಿಯನ್ನು ಮಂಜೂರು ಮಾಡಿದೆ. ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಅನಗತ್ಯ ನೋಟಿಸ್‌ಗಳನ್ನು ಜಾರಿ ಮಾಡುತ್ತಿರುವುದು ದೌರ್ಜನ್ಯವಾಗಿದ್ದು ಶೀಘ್ರದಲ್ಲೇ ರೈತರ ಜಮೀನಿಗಳ ದುರಸ್ಥಿ ಕಾರ್ಯ ನಡೆಯಬೇಕು ತಪ್ಪಿದಲ್ಲಿ ಮುಂದಿನ ದಿನದಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದರು.


ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ಈರಲಗೆರೆ, ಆದಿನಾಯಕನಹಳ್ಳಿ, ಅಣ್ಣೇಮಾರನಹಳ್ಳಿ, ಹಾಲ್ಕುರಿಕೆ, ಹಾಲೇನಹಳ್ಳಿ, ಕೊಡಿಗೆಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಖಾತೆ, ಪಹಣಿ, ಸಾಗುವಳಿ ಚೀಟಿ, ಮಂಜೂರಾತಿ ಹಾಗೂ ಖರೀದಿ ಪತ್ರಗಳನ್ನು ಹೊಂದಿದ್ದರೂ, ಇಲಾಖೆಯು ಅವುಗಳನ್ನು ಪರಿಗಣಿಸುತ್ತಿಲ್ಲ, ಅರಣ್ಯ ಇಲಾಖೆಯು ರೈತರ ವಿರುದ್ಧ ವ್ಯಾಜ್ಯಗಳನ್ನು ದಾಖಲಿಸಿ, ಕೋರ್ಟ್ ಹಾಗೂ ಕಚೇರಿಗಳ ಸುತ್ತ ಅಲೆದಾಡುವಂತೆ ಮಾಡುತ್ತಿದೆ. ರೈತರ ಪರ ದಾಖಲೆಗಳಿದ್ದರೂ, ರಾಜರ ಕಾಲದ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಅರಣ್ಯ ಇಲಾಖೆಯು ತನ್ನ ಹಕ್ಕು ಪ್ರತಿಪಾದಿಸುತ್ತಿದೆ ಎಂದು ದೂರಿದರು.


ಜಯಾನಂದಯ್ಯ ಮಾತನಾಡಿ, ಹೊನ್ನವಳ್ಳಿ ಹೋಬಳಿಯ ರುದ್ರಾಪುರ ಸರ್ವೆ ನಂ.೧೧೪ರಲ್ಲಿ ೧೧ ರೈತ ಕುಟುಂಬಗಳ ಪಹಣಿ ದಾಖಲೆಗಳನ್ನು ಅಳಿಸಿ ಹಾಕಲಾಗಿದೆ. ಇದರಿಂದ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಸರ್ಕಾರ ಸರಿಯಾದ ಕ್ರಮವಲ್ಲ ಆದ್ದರಿಂದ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘದ ಸುಬ್ರಹ್ಮಣ್ಯ, ರೈತ ಸಂಘದ ಮುಖಂಡ ತೀಮ್ಲಾಲಾಪುರ ದೇವರಾಜು, ಸಿದ್ದಯ್ಯ ಬಳವನೇರಲು, ಅಲ್ಲಾಬಕಾಷ್, ಶ್ರೀಕಾಂತ್ ಕೆಳಹಟ್ಟಿ, ನಾಗೇಶ್ ಬಿಳಿಗೆರೆಪಾಳ್ಯ, ಸಿದ್ದಬಸಪ್ಪರುದ್ರಾಪುರ, ಸದಾಶಿವಯ್ಯ ಗಡಬನಹಳ್ಳಿ, ಪರಮೇಶ್ ರುದ್ರಾಪುರ, ರಾಜಮ್ಮ, ರಂಗಧಾಮಯ್ಯಹಳೇಪಾಳ್ಯ, ತಿಮ್ಮೇಗೌಡ, ಮಲ್ಲಿಕಾರ್ಜುನ ಶಿಡ್ಲೇಹಳ್ಳಿ, ಶಂಕರಲಿಂಗಪ್ಪ, ಸೇರಿದಂತೆ ಈರಲಗೆರೆ, ಅಣ್ಣಾಮಾರನಹಳ್ಳಿ, ರುದ್ರಾಪುರ, ಬಳವನೇರಲು, ಶಿಡ್ಲೇಹಳ್ಳಿ, ಜಕ್ಕನಹಳ್ಳಿ, ಚೌಡ್ಲಾಪುರ, ಹಾಲ್ಕುರಿಕೆ, ತೀಮ್ಲಾಪುರ, ಗೋಪಾಲನಹಳ್ಳಿ, ಹೋನ್ನವಳ್ಳಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.