Home ಜಿಲ್ಲೆ ತುಮಕೂರು ಪತ್ರಕರ್ತರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

ಪತ್ರಕರ್ತರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

ಕುಣಿಗಲ್, ಜೂ. ೨೬- ಪತ್ರಕರ್ತರು ದಿನನಿತ್ಯ ಒತ್ತಡದ ಕೆಲಸದಿಂದಾಗಿ ತಮ್ಮ ಆರೋಗ್ಯಕ್ಕೆ ಗಮನ ನೀಡದೆ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು, ಇವರು ಕಾಲಕಾಲಕ್ಕೆ ತಪಾಸಣೆ ಮಾಡಿಕೊಳ್ಳುವ ಮೂಲಕ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಎಂಎಂ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಎಂ.ಆರ್. ರವಿಕುಮಾರ್ ತಿಳಿಸಿದರು.


ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕುಣಿಗಲ್ ಘಟಕದ ವತಿಯಿಂದ ಮತ್ತು ಎಂ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಪ್ರತಿನಿತ್ಯ ಸಮಾಜದ ಅಂಕು ಡೊಂಕು ತಿದ್ದುವ ಪತ್ರಕರ್ತರು ಸದಾ ಒತ್ತಡದಿಂದ ಸಮಯ ಪ್ರಜ್ಞೆಯೊಂದಿಗೆ ಸುದ್ದಿ ಸಮಾಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಾಯಕದಲ್ಲಿ ತೊಡಗಿರುತ್ತಾರೆ. ಬಹುತೇಕ ಪತ್ರಕರ್ತರು ಆರೋಗ್ಯದ ಬಗ್ಗೆ ಗಮನ ಕೊಡುವುದು ವಿರಳ. ಆದ್ದರಿಂದ ಏನೇ ಎಷ್ಟೇ ಒತ್ತಡ ಇರಲಿ, ಮೊದಲು ನಿಮ್ಮ ಆರೋಗ್ಯಕ್ಕೆ ಒತ್ತು ಕೊಡಿ ಎಂದು ಕಿವಿಮಾತು ಹೇಳಿದರು.


ಹಗಲು ರಾತ್ರಿ ಎನ್ನದೆ ಸುದ್ದಿಗಾಗಿ ಹುಡುಕಾಟ ಮಾಡುತ್ತಾ ಸಮಾಜದಲ್ಲಿ ನಡೆಯುವ ಗಲಾಟೆ, ರಾಜಕೀಯ, ಅಪಘಾತಗಳು, ಕೊಲೆ ಪ್ರಕರಣಗಳು, ಕಳ್ಳತನಗಳು ಸೇರಿದಂತೆ ಹಲವಾರು ಸುದ್ದಿಗಳ ಜತೆಗೆ ವಿಶೇಷ ವರದಿ ಮಾಡುವ ಮನಸೊತ್ತು ಸದಾ ಚಂಚಲ ಮನಸ್ಸಿನಲ್ಲಿಯೇ ಇರುವುದರಿಂದ ಪತ್ರಕರ್ತರು ಆರೋಗ್ಯಕ್ಕೆ ಕಾಳಜಿ ವಹಿಸದೆ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ವ್ಯಾಯಾಮದ ಜತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.


ಪ್ರಸ್ತುತ ಸಮಾಜದಲ್ಲಿ ಬಹುತೇಕ ಬಡವ ಬಲ್ಲಿದ ಎನ್ನದೆ ಹೃದಯ ಸಂಬಂಧಿ ಕಾಯಿಲೆಯೂ ಸಮಾಜದಲ್ಲಿ ಪ್ರತಿಯೊಬ್ಬ ಮನೆಮನೆಗೂ ಹರಡುತ್ತಿದ್ದು, ಮಕ್ಕಳು, ವಯಸ್ಸಾದವರು ಎನ್ನದೆ ಒತ್ತಡದಲ್ಲಿ ಕೆಲಸ ಮಾಡಬೇಕಾದಾಗ ಕಣ್ಣು, ನರ, ಕಿವಿ, ಸಕ್ಕರೆ ಕಾಯಿಲೆ, ಬಿಪಿ, ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದರಿಂದ ಕಾಲಕಾಲಕ್ಕೆ ಪತ್ರಕರ್ತರು ಸೇರಿದಂತೆ ಪ್ರತಿಯೊಬ್ಬರೂ ೪೦ ವರ್ಷ ದಾಟಿದ ನಂತರ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು ಉತ್ತಮ ಜೀವನ ಶೈಲಿಗೆ ಬದಲಾಯಿಸಿಕೊಳ್ಳಬೇಕು ಎಂದರು.


ಹಿಂದಿನ ಕಾಲದಲ್ಲಿ ಉತ್ತಮವಾದ ಆಹಾರ ಸೇವನೆಯಿಂದ ಜನಸಾಮಾನ್ಯರು ಯಾವುದೇ ರೋಗಕ್ಕೂ ತುತ್ತಾಗದೆ ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು. ಆದರೆ ಇಂದು ಸಾಮಾನ್ಯ ಜನರು ಪ್ರತಿಯೊಂದು ವಿಷಯದಲ್ಲೂ ಒತ್ತಡಕ್ಕೆ ಒಳಗಾಗಿ ನಾನಾ ವಿಧವಾದ ಖಾಯಿಲೆಗೆ ಮನುಷ್ಯ ತುತ್ತಾಗುತ್ತಿದ್ದಾನೆ. ಜತೆಗೆ ಹಲ್ಲು, ಕಣ್ಣು ಸೇರಿದಂತೆ ಪ್ರತಿ ಆರೋಗ್ಯಕ್ಕೆ ಹೆಚ್ಚಿನ ತಿಳುವಳಿಕೆ ನೀಡಿ ಸಕಾಲಕ್ಕೆ ಚಿಕಿತ್ಸೆಯನ್ನು ಪಡೆಯಬೇಕು. ಪತ್ರಕರ್ತರು ತಮ್ಮ ದಿನನಿತ್ಯದ ಒತ್ತಡದ ನಡುವೆ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ದಿನನಿತ್ಯ ಯೋಗ, ವಾಕಿಂಗ್ ಸೇರಿದಂತೆ ಉತ್ತಮ ಆಹಾರ ಸೇವನೆ ಮಾಡಬೇಕು ಎಂದರು.


ಮದ್ಯಪಾನ, ಗುಟ್ಕಾ ಸೇವನೆಯಿಂದ ಇತ್ತೀಚಿನ ದಿನಗಳಲ್ಲಿ ಲಿವರ್ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳು ಹರಡುತ್ತಿವೆ. ಜತೆಗೆ ನಾವು ತಿನ್ನುವ ಆಹಾರಗಳು ರಾಸಾಯನಿಕದಿಂದ ಕೂಡಿದ್ದು, ಯಾವುದೇ ಹಣ್ಣು, ತರಕಾರಿ ಸೇರಿದಂತೆ ಪ್ರತಿ ಬೆಳೆಗೂ ರಾಸಾಯನಿಕ ಸಿಂಪಡಿಸುವುದರಿಂದ ರೋಗಗಳು ಹೆಚ್ಚು ಹೆಚ್ಚು ಅದರಲ್ಲೂ ಹೊಸ ರೋಗಗಳು ಉತ್ಪತ್ತಿ ಆಗುತ್ತಿವೆ. ಇವೆಲ್ಲವಕ್ಕೂ ಪರಿಹಾರ ಎಂದರೆ ದಿನನಿತ್ಯ ಉತ್ತಮ ಆಹಾರ ಹಾಗೂ ಯೋಗಭ್ಯಾಸ, ವ್ಯಾಯಾಮವನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳುವಂತಾಗಬೇಕು ಎಂದರು.


ಕರುಳು ಹಾಗೂ ಉದರ ರೋಗ ತಜ್ಞರಾದ ಡಾ. ವಿನೋದಗೌಡ ಮಾತನಾಡಿ, ಪತ್ರಕರ್ತರು ತಮ್ಮ ಆರೋಗ್ಯವನ್ನು ಕಾಲಕಾಲಕ್ಕೆ ಪರೀಕ್ಷೆ ಮಾಡಿಕೊಳ್ಳುವ ಮೂಲಕ ಜತೆಗೆ ಅತಿ ಹೆಚ್ಚು ನೀರು ಕುಡಿಯುವ ಮೂಲಕ ಆರೋಗ್ಯ ಪರೀಕ್ಷೆ ಮಾಡಿಕೊಂಡು ಸಮಾಜಮುಖಿಯಾಗಿ ಆರೋಗ್ಯವಂತರಾಗಿ ಇರಬೇಕು ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೀಚನಹಳ್ಳಿ ಶ್ರೀನಿವಾಸ್ ಮಾತನಾಡಿ, ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುವುದರಿಂದ ಸಂಘದ ವತಿಯಿಂದ ಎಂ. ಎಂ ಹಾಸ್ಪಿಟಲ್ ಸಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ಕೈಗೊಂಡು ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಎಂ.ಎಂ ಆಸ್ಪತ್ರೆಯ ಮುಖ್ಯಸ್ಥರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.


ಕಾರ್ಯಕ್ರಮದಲ್ಲಿ ಡಾ. ಪರಿಮಳ. ಡಾ.ಆನಂದ್ ಸುಭಾಷ್., ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಎಂ.ಡಿ. ಮೋಹನ್, ಪ್ರಧಾನ ಕಾರ್ಯದರ್ಶಿ ಶರೀಫ್, ಕಾರ್ಯದರ್ಶಿ ಆನಂದ್ ಸಿಂಗ್, ಹಿರಿಯ ಪತ್ರಕರ್ತರಾದ ರಾಮಚಂದ್ರಯ್ಯ, ಕೆ.ಆರ್. ರಂಗನಾಥ್, ದಲಿತ್ ನಾರಾಯಣ್, ಶಂಕರ್, ಶಂಕರನಾಗ್, ಇಪ್ಪಾಡಿ ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.