
ಬೆಂಗಳೂರು, ಜೂ. ೨೬- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನನ್ನ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಇಂದು ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಆತ್ಮೀಯತೆಯಾಗಲೀ, ವ್ಯವಹಾರಿಕ ಸಂಬಂಧವಾಗಲೀ ಇಲ್ಲ. ಕೆಪಿಸಿಸಿ ಅಧ್ಯಕ್ಷರಿಗೆ ಕೊಡಬೇಕಾದ ಗೌರವ ಕೊಟ್ಟಿದ್ದೇನೆ. ಹಾಗೆಯೇ ಒಬ್ಬ ಶಾಸಕನಾಗಿ ರಾಜ್ಯದ ಮುಖ್ಯಮಂತ್ರಿಗೆ ಕೊಡಬೇಕಾದ ಗೌರವವನ್ನು ಕೊಟ್ಟಿದ್ದೇನೆ ಅಷ್ಟೇ ಎಂದು ಹೇಳಿದರು.
ನನ್ನ ಮತ್ತು ಡಿ.ಕೆ. ಶಿವಕುಮಾರ್ ನಡುವೆ ವ್ಯವಹಾರಿಕ ಸಂಬಂಧ, ಆತ್ಮೀಯತೆ ಇದೆ ಎಂದು ಸಾಕಷ್ಟು ಅಪಪ್ರಚಾರ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಎಲ್ಲೋ ಒಂದು ಕಡೆ ನಾನೇ ಅಡ್ಡ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದೇನೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆಗೆ ನಮ್ಮವರೇ ಕಾರಣ ಎಂಬುದು ನನಗೆ ಗೊತ್ತಿದೆ ಎಂದರು.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಇಂತಹ ಕೀಳುಮಟ್ಟದ ಕೆಲಸ ಮಾಡುವ ಪ್ರಶ್ನೆ ಉದ್ಭವಿಸಲ್ಲ. ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಹಿರಿಯರ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇನೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ. ಚುನಾವಣೆಯಲ್ಲಿ ಅಡ್ಡಮತದಾನವಾಗಿರುವುದು ನಾನು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರಿಗೆ ನೋವು ತಂದಿದೆ. ಶಾಸಕರ ಅಡ್ಡ ಮತದಾನವು ಬೇರೆ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ನನ್ನ ಬಗ್ಗೆ ಅಪಪ್ರಚಾರಗಳು ನಡೆಯುತ್ತಿವೆ ಎಂದು ನೋವಿನಿಂದ ಹೇಳಿದರು.
ಪರಿಷತ್ ಚುನಾವಣೆಯಲ್ಲಿ ನಾನೇ ಅಡ್ಡಮತದಾನ ಮಾಡಿದ್ದೇನೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಅವರು ಹೇಳಿದರು.ಎಸ್.ಟಿ ಸೋಮಶೇಖರ್ ಅವರು ನಮ್ಮ ಪಕ್ಷದ ಮೂವರು ಶಾಸಕರ ಜೊತೆ ಸಂಪರ್ಕ ಮಾಹಿತಿ ಇದೆ. ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಸತ್ಯ ಏನು ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದರು.
ಅಡ್ಡಮತದಾನದಲ್ಲಿ ಡಿ.ಕೆ ಶಿವಕುಮಾರ್ ಅವರ ಪಾತ್ರ ಇದೆಯೋ ಇಲ್ಲವೊ ಗೊತ್ತಿಲ್ಲ. ನಮ್ಮ ಶಾಸಕರಂತೂ ಸ್ವಯಂಪ್ರೇರಿತವಾಗಿ ಯಾರೂ ಅಡ್ಡ ಮತದಾನ ಮಾಡಿಲ್ಲ. ಯಾರೇ ಷಡ್ಯಂತ್ರ ಮಾಡಿದ್ದರೂ ತಿಳಿಯಲಿದೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರು ಬಹುಮುಖ ಪ್ರತಿಭೆಯ ಸಿಎಂ. ಅವರು ಯಾರದೇ ಮನೆಗೆ ಬಂದರೂ ಅವರ ಮನೆಯವರೇ ಎಂದು ಅನಿಸುತ್ತದೆ ಎಂದರು
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನನಗೆ ನೋವು ತಂದಿತು. ನಾನು ಭಾವನಾತ್ಮಕ ವ್ಯಕ್ತಿಯಾದ್ದರಿಂದ ಸತ್ಯಾಸತ್ಯತೆ ಹೊರ ಬರಲಿ ಎಂದು ಧರ್ಮಸ್ಥಳದಲ್ಲಿ ಆಣೆ, ಪ್ರಮಾಣದ ಮಾತುಗಳನ್ನಾಡಿದ್ದೆ. ಆದರೆ ಪಕ್ಷದ ಹಿರಿಯರು ನಮ್ಮಲ್ಲೇ ಇದನ್ನು ಬಗೆಹರಿಸಿಕೊಳ್ಳೋಣ ಎಂದಿದ್ದರಿಂದ ಈ ನಿರ್ಧಾರದಿಂದ ಹಿಂದೆ ಸರಿದೆ. ಈಗ ದೇವರ ದರ್ಶನಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದರು.
ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ದೇವರು ಒಳ್ಳೆಯದು ಮಾಡಲಿ. ನಾನಂತೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ವಿಜಯೇಂದ್ರ ಭಾವುಕರಾಗಿ ಹೇಳಿದರು.
ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಕಾಣುತ್ತಿದೆ. ಮಳೆ ಸಮರ್ಪಕವಾಗಿ ಆಗಿ ರೈತನ ಬದುಕು ಹಸನಾಗಬೇಕು. ರೈತನ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು.
ರೈತರು ಹಾಗೂ ನಾಡಿನ ಜನತೆಗೆ ಒಳ್ಳೆಯದಾಗಲಿ. ಮುಂದಿನ ಚುನಾವಣೆಯಲ್ಲಿ ನಮ್ಮೆಲ್ಲರ ನೇತೃತ್ವದಲ್ಲಿ ಒಂದು ಜನಪರ ಸರ್ಕಾರ ಅಧಿಕಾರಕ್ಕೆ ಬರಲಿ, ಹಿಂದೂಗಳನ್ನು ರಕ್ಷಣೆ ಮಾಡುವ, ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುವ ಒಳ್ಳೆಯ ಸರ್ಕಾರ ಬರಲಿ ಎಂದು ಮಂಜುನಾಥಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಅವರು ಹೇಳಿದರು.
























