
ತಿಪಟೂರು, ಜೂ. ೨೬- ಸದೃಢ ದೇಶ ನಿರ್ಮಾಣಕ್ಕೆ ಯುವ ಪೀಳಿಗೆ ಕೈಜೋಡಿಸಬೇಕು. ದೇಶಕ್ಕೆ ಕಂಟಕವಾಗಿರುವ ಮಾದಕ ದ್ರವ್ಯಗಳಿಂದ ಮುಕ್ತವಾದಾಗ ಸುಭದ್ರ ದೇಶ ನಿರ್ಮಾಣವಾಗುತ್ತದೆ. ಯುವಶಕ್ತಿ ವ್ಯಸನದಿಂದ ಮುಕ್ತಿ ಜೀವನಕ್ಕೆ ಶಕ್ತಿ, ಡ್ರಗ್ಸ್ ಬೇಡ ಜೀವನ ಬೇಕು ಎಂಬ ಪ್ರತಿಜ್ಞೆ ಮಾಡಬೇಕು ಎಂದು ಉಪವಿಭಾಗಾಧಿಕಾರಿ ಸಪ್ತಶ್ರೀ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಿದ್ದ ತಿಪಟೂರು ಉಪ ವಿಭಾಗ ನಗರ ಪೊಲೀಸ್ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ದಿನಾಚರಣೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನೈಜ ನಿದರ್ಶನಗಳ ಮೂಲಕ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮವನ್ನು ತಿಳಿಸಿದ ಅವರು, ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿ ದಿಸೆಯಲ್ಲಿ ಅಳವಡಿಸಿಕೊಂಡಾಗ ಉನ್ನತ ಉದ್ಯೋಗ ಮತ್ತು ಹುದ್ದೆಯನ್ನು ಅಲಂಕರಿಸಬಹುದು. ಸುಂದರವಾದ ವಿದ್ಯಾರ್ಥಿ ಜೀವನವನ್ನು ವಿದ್ಯಾಭ್ಯಾಸಕ್ಕೆ ಮಾತ್ರ ಮೀಸಲಿಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಡಿವೈಎಸ್ಪಿ ಉಮೇಶ್ ಮಾತನಾಡಿ, ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕೆ ಮಾದಕ ವಸ್ತುಗಳು ಹಾನಿಕರವಾಗಿದೆ. ಮಾದಕ ವ್ಯಸನಿಗಳು ತಮ್ಮ ಜೀವನ ಹಾಳು ಮಾಡಿಕೊಳ್ಳುವುದರ ಜತೆಗೆ ಸಹಪಾಠಿಗಳ ಜೀವನಕ್ಕೂ ತೊಂದರೆ ನೀಡುತ್ತಾರೆ. ಮಾದಕ ವಸ್ತು ಉತ್ಪಾದನೆ ಸೇವನೆ ಹಾಗೂ ಸಾಗಾಣಿಕೆ ಮಾಹಿತಿ ತಿಳಿದಾಗ ತಕ್ಷಣ ೧೯೩೩ಕ್ಕೆ ಕರೆ ಮಾಡಿ ಎಂದು ತಿಳಿಸಿದರು.
ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಸಮಯ ಸಂಯಮ ಪಾಲಿಸಬೇಕು. ಜತೆಗೆ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿ ದಿಸೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ದುಶ್ಚಟ ಮತ್ತು ಮೊಬೈಲ್ ವ್ಯಸನಿಗಳಾಗಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾತನಾಡಿ, ಮಾದಕ ದ್ರವ್ಯ ಸೇವನೆ ಸಾಮಾಜಿಕ ದೊಡ್ಡ ಪಿಡುಗಾಗಿದೆ. ಈ ಸಮಸ್ಯೆಯನ್ನು ಬೇರು ಸಹಿತ ಕೀಳಬೇಕು. ಯುವಕರೇ ದೇಶದ ಬೆನ್ನೆಲುಬು. ದುಶ್ಚಟಗಳಿಂದ ದೂರ ವಿದ್ದಾಗ ಆರೋಗ್ಯಕರ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಠಾಣೆಯ ವೃತ್ತ ಆರಕ್ಷಕ ನಿರೀಕ್ಷಕರಾದ ಚಂದ್ರಶೇಖರ್ ಪ್ರತಿಜ್ಞಾವಿಧಿ ಬೋಧಿಸಿದರು.
ವಿದ್ಯಾರ್ಥಿಗಳು ನಗರದ ಕಾಲೇಜಿನಿಂದ ಸಿಂಗ್ರಿ ನಂಜಪ್ಪ ವೃತ್ತದ ವರೆಗೆ ಬಿತ್ತಿಫಲಕಗಳ ಮುಖಾಂತರ ಅರಿವು ಮೂಡಿಸುತ್ತಾ ಜಾಥಾ ನಡೆಸಿದರು.
ಕಾರ್ಯಕ್ರಮದಲ್ಲಿ ನಗರ ಠಾಣೆ ಇನ್ಸ್‌ಪೆಕ್ಟರ್ ರವಿಕುಮಾರ್, ಗ್ರಾಮಾಂತರ ಠಾಣೆ ಇನ್ಸ್‌ಕ್ಟರ್ ವೆಂಕಟೇಶ್, ನೊಣವಿನಕೆರೆ, ಕಿಬ್ಬನಹಳ್ಳಿ, ಹೊನ್ನವಳ್ಳಿ, ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳುಸ, ಪೊಲೀಸರು ಹಾಗೂ ೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
























