Home ಮುಖಪುಟ ಸುದ್ದಿ ಬೈರಮಂಗಲದಲ್ಲಿ ನಾಳೆ ಸಿಎಂಗೆ ಕಾಯುತ್ತೇನೆ

ಬೈರಮಂಗಲದಲ್ಲಿ ನಾಳೆ ಸಿಎಂಗೆ ಕಾಯುತ್ತೇನೆ

ಬೆಂಗಳೂರು, ಜೂ. ೨೬- ಬಿಡದಿ ಟೌನ್ ಶಿಪ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಜತೆ ಬಹಿರಂಗ ಚರ್ಚೆಗೆ ನಾನು ನಾಳೆ ಬೈರಮಂಗಲಕ್ಕೆ ಹೋಗುತ್ತಿದ್ದೇನೆ. ಬೈರಮಂಗಲದಲ್ಲಿ ನಾಳೆ ಮಧ್ಯಾಹ್ನದವರೆಗೂ ಕಾಯುತ್ತೇನೆ. ಮುಖ್ಯಮಂತ್ರಿಗಳು ಬಂದರೆ ಸಂತೋಷ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.


ಬೆಂಗಳೂರಿನ ಜೆ.ಪಿ. ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ನಾಳೆ ಬೈರಮಂಗಲಕ್ಕೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಪತ್ರ ಬರೆದಿದ್ದೇನೆ. ಅವರು ಇನ್ನು ಉತ್ತರ ಕೊಟ್ಟಿಲ್ಲ. ನಾನಂತೂ ನಾಳೆ ಕೊಟ್ಟ ಸಮಯಕ್ಕೆ ಹೋಗುತ್ತಿದ್ದೇನೆ. ಅವರು ಚರ್ಚೆಗೆ ಬಂದರೆ ಎಲ್ಲ ಸುಗಮವಾಗಿ ಆಗುತ್ತದೆ ಎಂದರು.


ನಾಳೆ ನಾವು ಬೈರಮಂಗಲಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲು ಹೊರಟಿದ್ದಾರೆ. ನಾವೇನು ಅಲ್ಲಿ ಗಲಾಟೆ ಮಾಡಲು ಹೋಗುತ್ತಿಲ್ಲ. ರೈತರ ಹೋರಾಟಕ್ಕೆ ಬೆಂಬಲ ಕೊಡಲು ಹೋಗುತ್ತಿದ್ದೇವೆ ಅಷ್ಟೇ ಎಂದರು.


ನಾವಂತೂ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ. ನಾಳೆ ಮಧ್ಯಾಹ್ನದವರೆಗೂ ನಾನು ಅಲ್ಲೇ ಇರುತ್ತೇನೆ. ಕಾನೂನು ಮೀರಿ ಇವರು ಏನು ಮಾಡಲು ಹೊರಟಿದ್ದಾರೋ ಗೊತ್ತಿಲ್ಲ ಎಂದರು.


ಬಿಡದಿಯ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ಕೆಲ ರೈತರು ಭೂಮಿ ಕೊಡಲು ಒಪ್ಪಿರಬಹುದು. ನಿನ್ನೆಯಿಂದ ೧೫-೨೦ ಜನ ಭೂಮಿ ಕೊಡಲು ಸಿದ್ದ ಎಂದು ಧರಣಿ ಮಾಡುತ್ತಿದ್ದಾರೆ. ಇದರ ಹಿಂದಿರುವ ವಿಚಾರಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಇದರಲ್ಲಿ ನನ್ನ ವೈಯುಕ್ತಿಕ ಹಿತಾಸಕ್ತಿ ಏನಿಲ್ಲ. ರೈತರು ಭೂಮಿ ಕೊಡಲು ಒಪ್ಪಿದರೆ ನನ್ನದೇನು ತಕರಾರಿಲ್ಲ. ಆದರೆ ಬಲವಂತವಾಗಿ ರೈತರನ್ನು ಬೆದರಿಸಿದರೆ ಸರಿ ಹೋಗಲ್ಲ ಎಂದು ಕುಮಾರಸ್ವಾಮಿ ಖಡಕ್ ಆಗಿ ಹೇಳಿದರು.


ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಾದಲ್ಲಿ ರೈತರನ್ನು ಕರೆಸಿ ಸಭೆ ಮಾಡಿದ್ದೆ. ಆಗ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತ ಮಾಡಿದ್ದರು ಎಂಬುದನ್ನು ಕುಮಾರಸ್ವಾಮಿ ನೆನಪಿಸಿ, ನಾಳೆ ನಾನು ಬೈರಮಂಗಲದಲ್ಲಿ ಮಧ್ಯಾಹ್ನದವರೆಗೂ ಇರುತ್ತೇನೆ ಎಂದು ಪುನರುಚ್ಚರಿಸಿದರು.


ಕೇಂದ್ರ ಸಚಿವ ಕುಮಾರಸ್ವಾಮಿಯವರ ಬಳಿ ದುಬಾರಿ ವಾಚ್ ಇದೆ ಎಂಬ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ನನ್ನ ಬಳಿ ಅಂಬೇಡ್ಕರ್ ಚಿತ್ರ ಇರುವ ಹೆಚ್.ಎಂ.ಟಿ. ವಾಚ್ ಮಾತ್ರ ಇದೆ ಎಂದು ಸುದ್ದಿಗಾರರ ಮುಂದೆಯೇ ವಾಚ್ ಪ್ರದರ್ಶನ ಮಾಡಿ, ನನ್ನ ಹತ್ತಿರ ೭೫ ಲಕ್ಷ ಬೆಲೆಯ ವಾಚ್ ಇದೆ ಎಂಬ ಬಗ್ಗೆ ಎಸ್‌ಐಟಿಯನ್ನು ನನ್ನ ಮನೆಗೆ ಕಳುಹಿಸಿ ತನಿಖೆ ಮಾಡಿಸಲಿ ಎಂದು ವ್ಯಂಗ್ಯವಾಗಿ ಹೇಳಿದರು.