Home Lead News ಕಾಣಿಕೆ ಕದ್ದವರಿಗೆ ಕೋಳ

ಕಾಣಿಕೆ ಕದ್ದವರಿಗೆ ಕೋಳ

ಲಕ್ನೋ,ಜೂ೨೬: ಉತ್ತರ ಪ್ರದೇಶದ ಜಗತ್ಪ್ರಸಿದ್ಧ ಅಯೋಧ್ಯೆ ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಮತ್ತು ದೇಣಿಗೆ ಹಣವನ್ನು ವ್ಯವಸ್ಥಿತವಾಗಿ ಲೂಟಿ ಮಾಡಿರುವ ದೊಡ್ಡ ಹಗರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ ಒಟ್ಟು ಎಂಟು ಜನ ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಬಂಧಿತರೆಲ್ಲರೂ ಮಂದಿರದ ಕಾಣಿಕೆ ಎಣಿಕೆ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಸಿಬ್ಬಂದಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ರಾಮಮಂದಿರದ ಕಾಣಿಕೆ ಪೆಟ್ಟಿಗೆಗಳಿಂದ ಹಣವನ್ನು ಬೇರೆಡೆಗೆ ಸಾಗಿಸುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಈ ಪ್ರಮುಖ ಸಾಕ್ಷ್ಯಾಧಾರಗಳ ಮೇರೆಗೆ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಟ್ರಸ್ಟ್‌ನ ಸದಸ್ಯ ಕೃಷ್ಣಮೋಹನ್ ನೀಡಿದ ದೂರಿನನ್ವಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ನಿನ್ನೆ ತಡರಾತ್ರಿ ಅಯೋಧ್ಯೆಯಲ್ಲೇ ಇದ್ದ ಎಂಟೂ ಆರೋಪಿಗಳನ್ನು ಜಾಲಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇವರನ್ನು ಪೊಲೀಸ್ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ (ಮೇಲ್ವಿಚಾರಕ ಮತ್ತು ಚಂಪತ್ ರಾಯ್ ಆಪ್ತ)ಸುಭಾಷ್ ಶ್ರೀವಾಸ್ತವ (ಕಾಣಿಕೆ ಎಣಿಕೆ ಉಸ್ತುವಾರಿ)ಅನುಕಲ್ಪ್ ಮಿಶ್ರಾಲವಕುಶ್, ಮಿಶ್ರಾಅವಿನಾಶ್, ಶುಕ್ಲಾಮನೀಶ್, ಯಾದವ್ಕರುಣೇಶ್, ಪಾಂಡೆರಾಮಶಂಕರ್ ಬಂಧಿತ ಆರೋಪಿಗಳಾಗಿದ್ದಾರೆ.

‘ಕಾಣಿಕೆ ಕಳ್ಳತನ’ ರಾಜಕೀಯ ಕೆಸರೆರಚಾಟಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹೊತ್ತಲ್ಲೇ ರಾಮಮಂದಿರದ ದೇಣಿಗೆ ಹಣ ದುರುಪಯೋಗವಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಬಿಜೆಪಿ ಸರ್ಕಾರ ಎಫ್‌ಐಆರ್ ದಾಖಲಿಸುವ ಮೊದಲೇ ಎಸ್‌ಐಟಿ ತನಿಖೆಯ ನೆಪದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳನ್ನು ರಕ್ಷಿಸಲು ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಿದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಇತ್ತ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರಾಯ್ ಕೂಡ, ಸರ್ಕಾರ ಕೇವಲ ಔಪಚಾರಿಕತೆಗಾಗಿ ಎಫ್‌ಐಆರ್ ದಾಖಲಿಸಿದೆ ಎಂದು ಕಿಡಿಕಾರಿದ್ದಾರೆ. ಆಮ್ ಆದ್ಮಿ ಪಕ್ಷ ಕೂಡ ಈ ಘಟನೆಯು ದೇಶದ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಉತ್ತರ ಪ್ರದೇಶ ಸರ್ಕಾರರಾಜಕೀಯ ಆರೋಪ ಪ್ರತ್ಯಾರೋಪಗಳ ನಡುವೆ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಪ್ರತಿಕ್ರಿಯಿಸಿದ್ದು, “ಇದು ಯೋಗಿ ಆದಿತ್ಯನಾಥ್ ಅವರ ಸರ್ಕಾರ. ಅಪರಾಧಗಳ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ ನೀತಿಯಾಗಿದೆ. ಭಕ್ತರ ಕಾಣಿಕೆಗೆ ಕೈ ಹಾಕಿದ ಯಾರನ್ನೂ ಬಿಡುವುದಿಲ್ಲ. ಎಷ್ಟೇ ಪ್ರಭಾವಿಯಾಗಿದ್ದರೂ ಕಠಿಣ ಶಿಕ್ಷೆ ಖಚಿತ” ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಸ್ತುತ ಲಕ್ನೋ ಡಿವಿಜನಲ್ ಕಮಿಷನರ್ ವಿಜಯ್ ವಿಶ್ವಾಸ್ ಪಂತ್ ನೇತೃತ್ವದ ಮೂವರು ಸದಸ್ಯರ ಎಸ್‌ಐಟಿ ತಂಡವು ಮಂದಿರದ ಬ್ಯಾಂಕಿಂಗ್ ವ್ಯವಹಾರ ಹಾಗೂ ದೇಣಿಗೆ ಸಂಗ್ರಹದ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವರು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಟ್ರಸ್ಟ್‌ನ ಪ್ರಮುಖರಾದ ಚಂಪತ್ ರಾಯ್ ಅಥವಾ ಅನಿಲ್ ಮಿಶ್ರಾ ಅವರ ಹೆಸರನ್ನು ಸದ್ಯದ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿಲ್ಲ.

ಸಿಕ್ಕಿಬಿದ್ದಿದ್ದು ಹೇಗೆ?
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ಬ್ಯಾಂಕ್‌ಗೆ ಜಮೆಯಾಗುತ್ತಿದ್ದ್ದ ನಗದು ಮೊತ್ತದಲ್ಲಿ ಸತತವಾಗಿ ವ್ಯತ್ಯಾಸ ಕಂಡುಬಂದಿದ್ದನ್ನು ಗಮನಿಸಿದ್ದರು. ಪ್ರತಿ ಕಾಣಿಕೆ ಪೆಟ್ಟಿಗೆಯಿಂದ ಸಾಮಾನ್ಯವಾಗಿ ೬ ರಿಂದ ೭ ಲಕ್ಷ ರೂ. ಸಂಗ್ರಹವಾಗುತ್ತಿತ್ತು. ಆದರೆ ಕಳೆದ ಮೇ ತಿಂಗಳ ಕೊನೆಯ ವಾರದಿಂದ ೫೦೦ ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟುಗಳಲ್ಲಿ ಭಾರಿ ಪ್ರಮಾಣದ ಕೊರತೆ ಕಂಡುಬರುತ್ತಿತ್ತು. ಇದರಿಂದ ಸಂಶಯಗೊಂಡ ಟ್ರಸ್ಟ್ ಅಧಿಕಾರಿಗಳು, ಕಾಣಿಕೆ ಎಣಿಕೆ ಕೊಠಡಿಯಲ್ಲಿ ಯಾರಿಗೂ ತಿಳಿಯದಂತೆ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದರು.

ಹಾಲಿ ಇದ್ದ ಸಿಸಿಟಿವಿ ಕ್ಯಾಮೆರಾಗಳ ಕಣ್ಣು ತಪ್ಪಿಸಲು ಸಿಬ್ಬಂದಿಗಳು ದಾರಿಯೊಂದನ್ನು ಕಂಡುಕೊಂಡಿದ್ದರು. ಕಾಣಿಕೆ ಎಣಿಕೆ ಮಾಡುವಾಗ ಒಬ್ಬ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾಗೆ ಅಡ್ಡವಾಗಿ ನಿಲ್ಲುತ್ತಿದ್ದನು. ಇದೇ ಸಂದರ್ಭವನ್ನು ಬಳಸಿಕೊಂಡು ಮತ್ತೊಬ್ಬ ಸಿಬ್ಬಂದಿ ನೋಟಿನ ಕಟ್ಟುಗಳಿಂದ ಹಣವನ್ನು ಸದ್ದಿಲ್ಲದೆ ತನ್ನ ಬಟ್ಟೆಯೊಳಗೆ ಅಡಗಿಸಿಡುತ್ತಿದ್ದ ದೃಶ್ಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿಗಳು ಕೇವಲ ಹಣ ಲೂಟಿ ಮಾಡುವುದಷ್ಟೇ ಅಲ್ಲದೆ, ಲೆಕ್ಕ ಪತ್ರ ಹೊಂದಾಣಿಕೆ ಮಾಡಲು ವಂಚನೆಯ ಹೊಸ ಮಾರ್ಗೋಪಾಯ ಕಂಡುಕೊಂಡಿದ್ದರು. ಬ್ಯಾಂಕ್‌ಗೆ ಕಳುಹಿಸುವ ಪ್ರತಿ ನೋಟಿನ ಕಟ್ಟಿನಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ನೋಟುಗಳನ್ನು ಇಡುತ್ತಿದ್ದರು, ಆದರೆ ದಾಖಲೆಯಲ್ಲಿ ಮಾತ್ರ ಕಡಿಮೆ ಸಂಖ್ಯೆಯನ್ನು ನಮೂದಿಸುತ್ತಿದ್ದರು. ಬ್ಯಾಂಕ್ ಅಧಿಕಾರಿಗಳು ನೋಟುಗಳನ್ನು ಎಣಿಸದೇ ಕೇವಲ ಕಟ್ಟುಗಳನ್ನು ಮಾತ್ರ ಪರಿಶೀಲಿಸಿ ರಶೀದಿ ನೀಡುತ್ತಿದ್ದರು. ಬ್ಯಾಂಕ್ ತಲುಪುವ ಮುನ್ನವೇ ಆರೋಪಿಗಳು ಆ ಹೆಚ್ಚುವರಿ ನೋಟುಗಳನ್ನು ಜಾಣ್ಮೆಯಿಂದ ಕದ್ದು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದರು. ಈ ಮೂಲಕ ಬ್ಯಾಂಕ್ ದಾಖಲೆಗಳಲ್ಲೂ ಯಾವುದೇ ವ್ಯತ್ಯಾಸ ಬಾರದಂತೆ ವಂಚಿಸುತ್ತಿದ್ದರು.

ಪ್ರಕರಣದ ಪ್ರಮುಖ ಸೂತ್ರಧಾರಿ ಅನುಕಲ್ಪ್ ಮಿಶ್ರಾ ಎಂಬಾತ ತನ್ನ ಭಾವ ಮೈದ ಲವ್ ಕುಶ್ ಮಿಶ್ರಾ ಎಂಬಾತನ ಸಹಾಯದೊಂದಿಗೆ ಈ ವಂಚನೆ ಎಸಗಿದ್ದಾನೆ. ಪೊಲೀಸರು ಈಗಾಗಲೇ ಲವ್ ಕುಶ್ ಮಿಶ್ರಾ ಮನೆಯಿಂದ ಸುಮಾರು ೧೦ ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಕಾಣಿಕೆ ಎಣಿಕೆ ಕೊಠಡಿಯಲ್ಲಿದ್ದ ಬಹುತೇಕ ಸಿಬ್ಬಂದಿಗಳು ಪ್ರಭಾವಿಗಳ ಶಿಫಾರಸಿನ ಮೇರೆಗೆ ಕೆಲಸಕ್ಕೆ ಸೇರಿಕೊಂಡವರಾಗಿದ್ದಾರೆ. ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಚಾಲಕ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಯಾದ ತಿನ್ನು ಯಾದವ್ ಎಂಬಾತ ತನ್ನ ಸಂಬಂಧಿ ಮನೀಶ್ ಯಾದವ್‌ನನ್ನು ಎಣಿಕೆ ವಿಭಾಗಕ್ಕೆ ಸೇರಿಸಿದ್ದನು. ಇನ್ನು ಸಿಬ್ಬಂದಿಗಳು ಕರ್ತವ್ಯ ಮುಗಿಸಿ ಹೊರಹೋಗುವಾಗ ಯಾವುದೇ ದೇಹ ತಪಾಸಣೆ ನಡೆಸಲಾಗುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ದೀರ್ಘಕಾಲದಿಂದ ಲೂಟಿ ಮುಂದುವರಿಸಿದ್ದರು.

ರಾಮಲಲ್ಲಾನ ಒಡವೆಗಳಿಗೂ ಕೈಹಾಕಿದ ಕಳ್ಳರು
ಕೇವಲ ನಗದು ಮಾತ್ರವಲ್ಲದೆ, ಭಕ್ತರು ಕಾಣಿಕೆ ಪೆಟ್ಟಿಗೆಗೆ ಹಾಕುತ್ತಿದ್ದ ಚಿನ್ನ ಹಾಗೂ ಬೆಳ್ಳಿಯ ಒಡವೆಗಳನ್ನೂ ಈ ಜಾಲ ಲೂಟಿ ಮಾಡಿದೆ. ರಾಮಲಲ್ಲಾನಿಗೆ ಅರ್ಪಿಸಲಾಗಿದ್ದ ಕಿವಿಯೋಲೆ, ಮೂಗುತಿ, ಬಳೆಗಳು ಹಾಗೂ ಕಾಲುಗೆಜ್ಜೆಗಳನ್ನು ಕಾಣಿಕೆ ಪೆಟ್ಟಿಗೆಯಿಂದ ಅಧಿಕೃತವಾಗಿ ದಾಖಲಿಸುವ ಮುನ್ನವೇ ಕಳವು ಮಾಡಲಾಗುತ್ತಿತ್ತು. ಬಂಧಿತ ಆರೋಪಿಗಳಲ್ಲೊಬ್ಬನಾದ ಅವಿನಾಶ್ ಪಾಂಡೆ ಎಂಬಾತನ ಬ್ಯಾಂಕ್ ಖಾತೆಗೆ ಕದ್ದ ಹಣ ನೇರವಾಗಿ ಜಮಾ ಆಗಿರುವುದು ತನಿಖೆಯಿಂದ ದೃಢಪಟ್ಟಿದೆ.

ಸದ್ಯ ನಿರ್ಬಂಧಿತ ಎಣಿಕೆ ಕೊಠಡಿಯೊಳಗೆ ಮುಕ್ತ ಪ್ರವೇಶ ಹೊಂದಿದ್ದ ರಾಮ್ ಶಂಕರ್ ಯಾದವ್ ಅಲಿಯಾಸ್ ತಿನ್ನು ಯಾದವ್ ಮತ್ತು ಸುಭಾಷ್ ಚಂದ್ರ ಸೇರಿದಂತೆ ಇಡೀ ತಂಡದ ವಿರುದ್ಧ ಎಸ್‌ಐಟಿ ತನಿಖೆ ತೀವ್ರಗೊಳಿಸಿದೆ.

ಚಂಪತ್ ರಾಯ್ ರಾಜೀನಾಮೆಗೆ ಹೆಚ್ಚಿದ ಒತ್ತಡ
ರಾಮಮಂದಿರದ ದೇಣಿಗೆ ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಚಂಪತ್ ರಾಯ್ ಅವರ ಆಪ್ತ ಸಹಾಯಕ ರಮಾಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ ಎಂಟು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಂಧಿತರಲ್ಲಿ ಅನುಕಲ್ಪ್ ಮಿಶ್ರಾ, ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಲವ್ ಕುಶ್ ಮಿಶ್ರಾ, ರಮಾ ಶಂಕರ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ ಸೇರಿದ್ದಾರೆ.

ಆಪ್ತರ ಬಂಧನದ ಬೆನ್ನಲ್ಲೇ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರುವ ಚಂಪತ್ ರಾಯ್ ಅವರ ಮೇಲಿನ ಒತ್ತಡ ಹೆಚ್ಚಾಗಿದ್ದು, ನೈತಿಕತೆಯ ಆಧಾರದ ಮೇಲೆ ಅವರು ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಯೋಧ್ಯೆಯ ರಾಮಮಂದಿರದ ಆಸ್ತಿ ಮತ್ತು ದೇಣಿಗೆ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.