
ಕಲಬುರಗಿ, ನ.21: ಟಿಪ್ಪುಸುಲ್ತಾನ್ ಜಯಂತಿಯನ್ನು ಸರ್ಕಾರ ಹಿಂದಿನಂತೆ ಆಚರಣೆ ಮಾಡಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.ಹಿಂದಿನ ಸರ್ಕಾರ ಪಠ್ಯದಿಂದ ತೆಗೆದುಹಾಕಿದ್ದ ಟಿಪ್ಪು ವಿಷಯವನ್ನು ಮರುಸೇರಿಸಲು ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಟಿಪ್ಪು ಸುಲ್ತಾನ್ ವಂಶಸ್ಥ ಸೈಯದ್ ಮನಸೂರ್ ಅಲಿ ಟಿಪ್ಪು ತಿಳಿಸಿದರು.
ನಗರದ ಡಾ. ಎಸ್ ಎಂ ಪಂಡಿತರಂಗಮಂದಿರದಲ್ಲಿ ಶುಕ್ರವಾರ ಅಲ್ಪಸಂಖ್ಯಾತ,ಹಿಂದುಳಿದ ,ದಲಿತ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಟಿಪ್ಪು ಉತ್ಸವ-2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಕೇಟ್ ಅನ್ವೇಷಣೆ ಸೇರಿದಂತೆ ಟಿಪ್ಪುಸುಲ್ತಾನ್ ಸಾಧನೆಗಳು ಸಾಕಷ್ಟಿದ್ದು, ಈ ಇತಿಹಾಸವನ್ನು ಗೆಜೆಟ್ ನಲ್ಲಿ ಸೇರಿಸಲು ಮನವಿ ಸಲ್ಲಿಸಲಾಗಿದೆ.ಟಿಪ್ಪು ಹಿಂದೂಧರ್ಮದ ವಿರೋಧಿಯಾಗಿರಲಿಲ್ಲ ಎಂದರು.
ಸಮಾಜ ಸೇವಕ ಡಾ. ಫಾರೂಕ್ ಅಹ್ಮದ್ ಮಣೂರ್ ಮಾತನಾಡಿ,ಹುಲಿಯಂತೆ ಬದುಕಿದ, ಹುಲಿಯಂತೆ ಹೋರಾಡಿದ ಮತ್ತು ಹುಲಿಯಂತೆ ಇತಿಹಾಸದಲ್ಲಿ ಉಳಿದವನು ಟಿಪ್ಪುಸುಲ್ತಾನ್.ಟಿಪ್ಪುಸುಲ್ತಾನ್ ಕೇವಲ ಹೆಸರಲ್ಲ ಧೈರ್ಯದ ಸ್ವಾಭಿಮಾನದ ಸಂಕೇತ ಎಂದರು. ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿದರು.ವೆಂಕನಗೌಡ ಪಾಟೀಲ,ಮಲ್ಲಿಕಾರ್ಜುನಶೆಟ್ಟಿ ಉಪನ್ಯಾಸ ನೀಡಿದರು.ಬೆಳಮಗಿಯ ಅಮರಜ್ಯೋತಿ ಬಂತೇಜಿ,ತೊನಸನಹಳ್ಳಿ ( ಎಸ್ )ಯ ಮಲ್ಲಣಪ್ಪ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು.ದಲಿತಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅಧ್ಯಕ್ಷತೆ ವಹಿಸಿದರು.ವಿವಿಧ ಸಾಧಕರಿಗೆ ಟಿಪ್ಪು ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಜ್ಹರಿ ಮೌಲಾನಾ ಮೊಹಮ್ಮದ್ ಶರೀಫ್ಸಾಬ,ವಹಾಬ್ ಬಾಬಾ, ಮಹಿಬೂಬ ಮನಿಯಾರ,ಸಿದ್ದರಾಮ ಪ್ಯಾಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.




















