
ಕಲಬುರಗಿ : ದೂರದರ್ಶನವು ಶಿಕ್ಷಣ, ಮನರಂಜನೆ ಮತ್ತು ಮಾಹಿತಿ ಒದಗಿಸುವ ಮೂಲಕ ಹಲವು ಉಪಯೋಗಗಳನ್ನು ಹೊಂದಿದೆ. ಇದರ ಮೂಲಕ ನಾಡಿನ ಮತ್ತು ಜಾಗತಿಕ ಘಟನೆಗಳ ಕುರಿತು ಸುದ್ದಿ ಪಡೆಯಬಹುದು, ಶೈಕ್ಷಣಿಕ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು ಮತ್ತು ವಿವಿಧ ಸಂಸ್ಕೃತಿಗಳು, ಕಲೆಗಳು ಹಾಗೂ ಮನರಂಜನೆ ಕಾರ್ಯಕ್ರಮಗಳ ಮೂಲಕ ವಿಶ್ರಾಂತಿ ಪಡೆಯಬಹುದು. ಸರ್ಕಾರದ ಯೋಜನೆಗಳು, ಆರೋಗ್ಯ ಮಾಹಿತಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿಗಳನ್ನು ಪಡೆಯಲು ದೂರದರ್ಶನ ಸಹಕಾರಿಯಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ‘ರಿಪಬ್ಲಿಕ್ ಸ್ಪೋಕನ್ ಟ್ಯುಟೋರಿಯಲ್್ಸ’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ವಿಶ್ವ ದೂರದರ್ಶನ ದಿನಾಚರಣೆ”ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ದೂರದರ್ಶನದ ಅತಿಯಾದ ಬಳಕೆಯು ದೈಹಿಕ ಚಟುವಟಿಕೆಯ ಕೊರತೆ, ಕಣ್ಣಿನ ಆಯಾಸ, ಮತ್ತು ವ್ಯಸನಕ್ಕೆ ಕಾರಣವಾಗುವಂತಹ ಅನಾನುಕೂಲಗಳನ್ನು ಹೊಂದಿದೆ. ಇದರ ಅನುಕೂಲಗಳನ್ನು ಪಡೆಯಲು ಮತ್ತು ಅನಾನುಕೂಲಗಳನ್ನು ಕಡಿಮೆ ಮಾಡಲು ಜವಾಬ್ದಾರಿಯುತವಾಗಿ ವೀಕ್ಷಿಸುವುದು ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ರಾಜಶೇಖರ ಪಾಟೀಲ್, ಶಿವಯೋಗೆಪ್ಪಾ ಎಸ್. ಬಿರಾದಾರ, ದತ್ತು ಹಡಪದ, ಫಿರೋಜ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.





















