
ಸಂಜೆವಾಣಿ ವಾರ್ತೆ,
ವಿಜಯಪುರ, ಅ.೮: ಇಂದಿನ ಯುವಜನತೆ ಕುವೆಂಪು ಅವರ ವೈಚಾರಿಕ ಚಿಂತನೆಗಳನ್ನು ಅರಿತುಕೊಳ್ಳಬೇಕು. ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಪ್ರಭಾವಗಳಿಂದ ತಮ್ಮ ವಿಚಾರಶೀಲತೆಯನ್ನು ಸಂಕುಚಿತಗೊಳಿಸಿಕೊಳ್ಳದೆ, ಸ್ವತಂತ್ರವಾಗಿ ಆಲೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಚನ್ನಪ್ಪ ಕಟ್ಟಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಭಾಷಾ ವಿಜ್ಞಾನ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಕುವೆಂಪು ಓದು: ಕಮ್ಮಟ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಅವರು ಯುವಜನರಿಗೆ ‘ನಿನಗೆ ನೀನೇ ಗುರು’ ಎಂಬ ಸಂದೇಶ ನೀಡಿದ್ದರು. ಪ್ರತಿಯೊಬ್ಬರೂ ಸ್ವತಂತ್ರವಾಗಿ ಚಿಂತಿಸಿ, ಹೊಸ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕು ಎಂಬ ಉದ್ದೇಶದಿಂದ ಕುವೆಂಪು ಓದು ಕಮ್ಮಟ ಆಯೋಜಿಸಲಾಗಿದೆ ಎಂದರು.
ಕುವೆAಪು ಅವರ ಸಾಹಿತ್ಯ ಸಾಮಾನ್ಯ ಜನಕೇಂದ್ರಿತವಾಗಿದ್ದು, ಮಹಿಳೆಯರು ಹಾಗೂ ರೈತರ ಬದುಕು-ಬವಣೆಗಳಿಗೆ ಮಹತ್ವದ ಸ್ಥಾನ ನೀಡಿದೆ. ಅನ್ನವನ್ನು ಉತ್ಪಾದಿಸುವ ರೈತರನ್ನು ತಮ್ಮ ಸಾಹಿತ್ಯದ ಮೂಲಕ ಗೌರವಿಸಿದ ಕುವೆಂಪು ಅವರು ಕನ್ನಡ ನಾಡು ಕಂಡ ಶತಮಾನ ಕಂಡ ಅಪರೂಪದ ವ್ಯಕ್ತಿತ್ವ. ಅವರ ವಿಚಾರಧಾರೆಗಳನ್ನು ಯುವಜನರಿಗೆ ತಲುಪಿಸುವಲ್ಲಿ ಇಂತಹ ಕಮ್ಮಟಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ-ಸಂಚಾಲಕ ಎಸ್. ಗಂಗಾಧರಯ್ಯ ಮಾತನಾಡಿ, ಕುವೆಂಪು ಓದು ಕಮ್ಮಟದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಹಾಗೂ ಸಾಮಾಜಿಕ ಸಂವೇದನೆಯನ್ನು ಬೆಳೆಸುತ್ತವೆ. ಪದವಿ ಶಿಕ್ಷಣದಾಚೆಗೂ ವಿದ್ಯಾರ್ಥಿಗಳ ಚಿಂತನಾ ಸಾಮರ್ಥ್ಯವನ್ನು ವಿಸ್ತರಿಸುವುದು ಹಾಗೂ ಕುವೆಂಪು ಅವರ ಆಶಯಗಳನ್ನು ಯುವ ಮನಸ್ಸುಗಳಿಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಆಡಳಿತಾಧಿಕಾರಿ ಪ್ರೊ. ವಿ.ಎಸ್. ಬಗಲಿ ಮಾತನಾಡಿ, ಕುವೆಂಪು ಅವರು ಸಾಹಿತ್ಯದ ಮೂಲಕ ಜಾತಿ, ಮತ, ಭಾಷೆಗಳ ಎಲ್ಲೆಗಳನ್ನು ಮೀರಿ ಮನುಷ್ಯರೆಲ್ಲರೂ ಒಂದೇ ಎಂಬ ಮಾನವೀಯ ಸಂದೇಶ ಸಾರಿದ್ದಾರೆ. ವಿದ್ಯಾರ್ಥಿಗಳು ಅವರ ಕೃತಿಗಳನ್ನು ಓದುವುದರ ಜೊತೆಗೆ ಅವರ ವಿಚಾರಧಾರೆಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶ್ರೀನಿವಾಸ ಎ.ಟಿ. ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ಕುವೆಂಪು ಓದು ಕಮ್ಮಟದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರ ವೈಚಾರಿಕತೆಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಕಮ್ಮಟದ ನಿರ್ದೇಶಕ ಡಾ. ವೈ.ಎಂ. ಯಾಕೊಳ್ಳಿ, ರಿಜಿಸ್ಟ್ರಾರ್ ದತ್ತಪ್ಪ ಸಾಗನೂರ, ಐಕ್ಯೂಎಸಿ ಸಂಯೋಜಕ ಡಾ. ಪಿ.ಎಸ್. ಪಾಟೀಲ್, ಭಾಷಾ ವಿಜ್ಞಾನ ವೇದಿಕೆ ಸಂಯೋಜಕ ಡಾ. ಧರ್ಮಗುರು ಪ್ರಸಾದ ಎಂ.ಪಿ., ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಉಷಾದೇವಿ ಹಿರೇಮಠ, ವಿವಿಧ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಉಷಾದೇವಿ ಹಿರೇಮಠ ಸ್ವಾಗತಿಸಿದರು. ಡಾ. ಸವಿತಾ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಧರ್ಮಗುರು ಪ್ರಸಾದ ಎಂ.ಪಿ. ವಂದಿಸಿದರು.


























