
ಮುಂಬೈ, ಅ. 9-ಅಜಯ್ ದೇವಗನ್ ಅಭಿನಯದ `ದೃಶ್ಯಂ 3: ದಿ ಕನ್‍ಕ್ಲೂಷನ್’ ಚಿತ್ರವು ಬಾಕ್ಸ್ ಆಫೀಸ್‍ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, 2026ರ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಅಗ್ರ 4 ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ.
ಶುಕ್ರವಾರ ಗಲ್ಲಾಪೆಟ್ಟಿಗೆಗೆ ಲಗ್ಗೆ ಇಟ್ಟಿದ್ದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಾ ತನ್ನ ಮೊದಲ ವಾರವನ್ನು ಪೂರ್ಣಗೊಳಿಸಿದೆ. ಏಳನೇ ದಿನದ ಅಂತ್ಯಕ್ಕೆ ಭಾರತದಲ್ಲಿ 13 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡುವುದರೊಂದಿಗೆ, ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು ನಿವ್ವಳ ಸಂಗ್ರಹವು 245.50 ಕೋಟಿ ರೂಪಾಯಿಗೆ (ಗ್ರಾಸ್ 294.60 ಕೋಟಿ ರೂ.) ಏರಿಕೆಯಾಗಿದೆ. ವಿದೇಶಿ ಮಾರುಕಟ್ಟೆಗಳಿಂದ ಬಂದ 89 ಕೋಟಿ ರೂಪಾಯಿ ಗಳಿಕೆಯನ್ನೂ ಸೇರಿಸಿದರೆ, ಚಿತ್ರದ ಜಾಗತಿಕ ಒಟ್ಟು ಗಳಿಕೆ (Woಡಿಟಜತಿiಜe ಉಡಿoss) 383.60 ಕೋಟಿ ರೂಪಾಯಿಗೆ ತಲುಪಿದ್ದು, ಶೀಘ್ರದಲ್ಲೇ 400 ಕೋಟಿ ರೂಪಾಯಿಗಳ ಗಡಿಯನ್ನು ದಾಟುವತ್ತ ಧಾವಿಸುತ್ತಿದೆ.
ಈ ಯಶಸ್ಸಿನೊಂದಿಗೆ ‘ದೃಶ್ಯಂ 3’ ಸಿನಿಮಾವು ಈ ಹಿಂದೆ ಬಾಕ್ಸ್ ಆಫೀಸ್‍ನಲ್ಲಿ ಭಾರಿ ಕಲೆಕ್ಷನ್ ಮಾಡಿದ್ದ ‘ದೃಶ್ಯಂ 2’ (239.67 ಕೋಟಿ ರೂ.) ಚಿತ್ರದ ಒಟ್ಟು ಗಳಿಕೆಯ ದಾಖಲೆಯನ್ನು ಹಿಂದಿಕ್ಕಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ಭರ್ಜರಿ ಗಳಿಕೆ ದಾಖಲಿಸಿದ್ದ ಈ ಚಿತ್ರ, ವಾರದ ದಿನಗಳಲ್ಲಿ ಕೊಂಚ ಕುಸಿತ ಕಂಡರೂ ಸ್ಥಿರವಾದ ಗಳಿಕೆಯನ್ನು ಕಾಯ್ದುಕೊಂಡಿದೆ.
ಆರಂಭಿಕ ದಿನದಲ್ಲಿ 62 ಕೋಟಿ ರೂ., ಶನಿವಾರ 53.50 ಕೋಟಿ ರೂ., ಹಾಗೂ ಭಾನುವಾರ 61 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಅಭಿಷೇಕ್ ಪಾಠಕ್ ನಿರ್ದೇಶನದ ಹಾಗೂ ತಬು, ಜೈದೀಪ್ ಅಹ್ಲಾವತ್ ಮತ್ತು ಶ್ರಿಯಾ ಶರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಎರಡನೇ ವಾರದಲ್ಲೂ ತನ್ನ ಗಳಿಕೆಯ ವೇಗವನ್ನು ಮುಂದುವರಿಸುವ ನಿರೀಕ್ಷೆಯಿದೆ.























