
‘ಶ್ರೀಅನ್ನದಾನೀಶ್ವರ ಮಹಾತ್ಮೆ’ ಟ್ರೇಲರ್ ಬಿಡುಗಡೆ
ಆಧ್ಯಾತ್ಮ, ಶಿಕ್ಷಣ ಹಾಗೂ ಅನ್ನದಾನದ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳ ಜೀವನಗಾಥೆ ಇದೀಗ ಬೆಳ್ಳಿತೆರೆಗೆ ಬರುತ್ತಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅನ್ನದಾನೀಶ್ವರ ಸ್ವಾಮಿಗಳ ಜೀವನಚರಿತ್ರೆ ಆಧರಿಸಿದ ‘ಶ್ರೀಅನ್ನದಾನೀಶ್ವರ ಮಹಾತ್ಮೆ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಅನಾವರಣಗೊಂಡಿತು.
ಪರಮಪೂಜ್ಯ ಇಟಗಿ ಶ್ರೀಗಳು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಅನ್ನದಾನೀಶ್ವರ ಸ್ವಾಮಿಗಳ ಕುರಿತು ಭಕ್ತಿಭಾವದಿಂದ ಮಾತನಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಂತಃಪುರ ಶ್ರೀಗಳು ಸಾನಿಧ್ಯ ವಹಿಸಿ ‘ಜ್ಞಾನ ಮೇರುವಾಗಿ’ ಹಾಡನ್ನು ಬಿಡುಗಡೆಗೊಳಿಸಿ, ಕುಟುಂಬ ಸಮೇತ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಡಾ. ರಮೇಶ್ ಶೆಟ್ಟಿ (ಬೈಂದೂರು), ಪುಷ್ಪಲತಾ ಹಾಗೂ ರಕ್ಷಕ ವಿಜಯಕುಮಾರ್ ಸೂರಿ ಮೆರಾಡೇ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಮತಾ ಎನ್.ಎಸ್. ನಿರ್ಮಾಣದ ಹಾಗೂ ಗೌರಿ ಎಲ್. ರಾಮೇಗೌಡ ನಿರ್ದೇಶನದ ಈ ಚಿತ್ರದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್ ಅವರು ಅನ್ನದಾನೀಶ್ವರ ಶ್ರೀಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನ್ನದಾನೀಶ್ವರ ಶಾಖಾಮಠದ ಕುಕನೂರಿನ ಡಾ. ಮಹದೇವ ದೇವರು ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಂಜಯ್ ಕುಮಾರ್ ಬೇವಿನಾಳ್ ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದು, ವಿ. ಮನೋಹರ್ ಸಂಗೀತ ಸಂಯೋಜಿಸಿದ್ದಾರೆ.
ನಿರ್ದೇಶಕಿ ಗೌರಿ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಚಿತ್ರದಲ್ಲಿ 100ಕ್ಕೂ ಹೆಚ್ಚು ಸ್ವಾಮಿಗಳು ಅಭಿನಯಿಸಿದ್ದು, ಸಿದ್ದಗಂಗಾ ಹಾಗೂ ಅನ್ನದಾನೀಶ್ವರ ಮಠದ ಸುಮಾರು 25 ಸಾವಿರ ಮಕ್ಕಳು ಕಾಣಿಸಿಕೊಂಡಿದ್ದಾರೆ ಎಂದರು.
ಅಭಿಜಿತ್ ಮಾತನಾಡಿ, ಗುರುಗಳ ಆಶೀರ್ವಾದ ಹಾಗೂ ಇಚ್ಛೆಯಿಂದ ಈ ಪಾತ್ರ ತಮ್ಮ ಪಾಲಿಗೆ ಬಂದಿದೆ. ಗೌರಿ ಅವರು ಪಾತ್ರವನ್ನು ಅತ್ಯುತ್ತಮವಾಗಿ ಹೊರತಂದಿದ್ದು, ಇಂತಹ ಕಥೆಗೆ ನೇಟಿವಿಟಿ ಬಹಳ ಮುಖ್ಯ. ಈ ಪಾತ್ರ ದೊರೆತಿರುವುದು ಪೂರ್ವಜನ್ಮದ ಪುಣ್ಯ ಎಂದರು.
ಚಿತ್ರಕಥೆಗಾರ ಸಂಜಯ್ ಕುಮಾರ್ ಬೇವಿನಾಳ್, ಅನ್ನ, ಅರಿವು ಹಾಗೂ ಶಿಕ್ಷಣದ ತ್ರಿವಿಧ ದಾಸೋಹದ ಮೂಲಕ ಸಮಾಜದಲ್ಲಿ ಬದಲಾವಣೆ ತಂದ ಮಹಾತ್ಮರ ಕುರಿತು ಬರೆಯುವ ಅವಕಾಶ ದೊರೆತಿರುವುದು ಸೌಭಾಗ್ಯ ಎಂದರು. ಸಂಕಲನಕಾರ ಎನ್.ಎಂ. ವಿಶ್ವ, ಚಿತ್ರಕ್ಕೆ ಹಲವು ಪ್ರಶಸ್ತಿಗಳು ಲಭಿಸುವ ನಿರೀಕ್ಷೆ ವ್ಯಕ್ತಪಡಿಸಿದರು.
ಮೈಸೂರು ಸಿದ್ದರಾಜು ಹಾಗೂ ಶಿವಶರಣ ವಿ. ಸುಗ್ನಳ್ಳಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಶಿವಕುಮಾರ್, ಆರಾಧ್ಯ, ರತ್ನಮಾಲ ಸುಂದರ್, ಜೂನಿಯರ್ ರಾಜಕುಮಾರ್, ಗಣೇಶ್ ಭಟ್ರು, ಮೂಗು ಸುರೇಶ್, ಡಿಂಗರಿ ನಾಗರಾಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕಿ ಮಮತಾ ಎನ್.ಎಸ್. ಉಪಸ್ಥಿತರಿದ್ದ ಗಣ್ಯರು ಹಾಗೂ ಕಲಾವಿದರಿಗೆ ಧನ್ಯವಾದ ಅರ್ಪಿಸಿದರು.























