
ಮೈಸೂರು, ಅ.9:- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಸಿದ್ಧತೆ ಭರದಿಂದ ಸಾಗಿದ್ದು, ಗಜಪಡೆಗೆ ಇಂದು ಎರಡನೇ ಹಂತದ ಕುಶಾಲತೋಪು ತಾಲೀಮು ನಡೆಸಲಾಯಿತು.
ನಗರ ಸಶಸ್ತ್ರ ಮೀಸಲು ಪಡೆ ವತಿಯಿಂದ 7 ಫಿರಂಗಿ ಗಾಡಿಗಳ ಮೂಲಕ 21 ಸುತ್ತು ಭಾರೀ ಕುಶಾಲತೋಪುಗಳನ್ನು ಸಿಡಿಸಲಾಯಿತು. ತಾಲೀಮಿನಲ್ಲಿ ಅಶ್ವದಳದ 43 ಕುದುರೆಗಳು ಹಾಗೂ ಗಜಪಡೆಯ 13 ಆನೆಗಳು ಭಾಗವಹಿಸಿದ್ದವು.
ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಮಹೇಂದ್ರ, ಪ್ರಶಾಂತ, ಸುಗ್ರೀವ, ಏಕಲವ್ಯ, ಶ್ರೀರಾಮ, ಗೋಪಿ, ಆನೆಗಳಾದ ಕಾವೇರಿ, ಲಕ್ಷ್ಮಿ, ಚೈತ್ರಾ, ರೂಪಾ ಮತ್ತು ಶ್ರೀಕಂಠ ಸೇರಿದಂತೆ ಎಲ್ಲಾ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು.
ವಿಶೇಷವೆಂದರೆ, ಮೊದಲ ಹಂತದ ತಾಲೀಮಿನಲ್ಲಿ ಕುಶಾಲತೋಪಿನ ಸದ್ದಿಗೆ ಶ್ರೀಕಂಠ ಮತ್ತು ಶ್ರೀರಾಮ ಆನೆಗಳು ಕೊಂಚ ವಿಚಲಿತಗೊಂಡಿದ್ದವು. ಆದರೆ ಇಂದು ನಡೆದ ಎರಡನೇ ಹಂತದ ತಾಲೀಮಿನಲ್ಲಿ ಯಾವುದೇ ಆನೆಗಳು ಮತ್ತು ಕುದುರೆಗಳು ಭಯಪಡದೆ, ಅತ್ಯಂತ ಶಿಸ್ತಿನಿಂದ ನಿಂತು ತಾಲೀಮು ಯಶಸ್ವಿಗೊಳಿಸಿದವು.
ಜಂಬೂಸವಾರಿಗೆ ಗಜಪಡೆ ಸಂಪೂರ್ಣ ಸಜ್ಜಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದಸರಾ ಗಜಪಡೆಯ ಎರಡನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿಯಾಗಿದೆ. ಯಾವುದೇ ಆನೆಗಳು ಗುಂಡಿನ ಸದ್ದಿಗೆ ಬೆದರಿಲ್ಲ. ಎಲ್ಲಾ ಆನೆಗಳು ಸದ್ದಿಗೆ ಹೊಂದಿಕೊಂಡಿದ್ದು, ಆನೆಗಳ ಆರೋಗ್ಯ ಉತ್ತಮವಾಗಿದೆ ಎಂದು ಡಿಸಿಎಫ್ ಡಾ. ಪ್ರಭುಗೌಡ ತಿಳಿಸಿದ್ದಾರೆ.
ತಾಲೀಮಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹೇಂದ್ರ ಆನೆ ಭಾರ ಹೊರಲು ಹಿಂದೇಟು ಹಾಕುತ್ತಿದೆ. ಈ ಹಿಂದೆ ನಾಲ್ಕು ಬಾರಿ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗವಹಿಸಿದ್ದಾನೆ. ಸದ್ಯ ಆತನಿಗೆ ಭಾರ ಹೊರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆತನನ್ನು ಅಂಬಾರಿ ಹೊರಲು ಪರಿಗಣಿಸುವುದಿಲ್ಲ.
ಇನ್ನೆರಡು ದಿನಗಳಲ್ಲಿ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗವಹಿಸುವ ಆನೆಯನ್ನು ಫೈನಲ್ ಮಾಡುತ್ತೇವೆ.
ಸದ್ಯ ಅಂಬಾರಿ ಹೊರುವ ರೇಸ್‍ನಲ್ಲಿ ಧನಂಜಯ, ಪ್ರಶಾಂತ, ಸುಗ್ರೀವಾ ಮತ್ತು ಏಕಲವ್ಯ ಆನೆಗಳು ಇವೆ. ಈ ನಾಲ್ಕರಲ್ಲಿ ಒಂದು ಆನೆಯನ್ನು ಅಂಬಾರಿ ಹೊರುವ ಆನೆಯಾಗಿ ಅಂತಿಮಗೊಳಿಸಲಾಗುವುದು, ಎಂದು ಹೇಳಿದರು.

























