
ಪೋಸ್ಟರ್ ಬಿಡುಗಡೆ
ಉತ್ತರ ಕರ್ನಾಟಕದ ಭಾಷೆ, ಬದುಕು ಹಾಗೂ ಅಲ್ಲಿನ ಸಂಸ್ಕೃತಿಯನ್ನು ತೆರೆಗೆ ತರುತ್ತಿರುವ ‘ಧಗೆ’ ಸಿನಿಮಾ ಇದೀಗ ವಿಭಿನ್ನ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಕಥೆಯ ಪ್ರಮುಖ ಭಾಗವಾಗಿಯೇ ‘ಸುರಕ್ಷ ಟೀ’ ಕಾಣಿಸಿಕೊಳ್ಳಲಿದ್ದು, ಚಿತ್ರದ ಪೋಸ್ಟರ್ ಜೊತೆಗೆ ‘ಸುರಕ್ಷ ಟೀ’ ಫ್ರಾಂಚೈಸಿ ಹಾಗೂ ಡಿಸ್ಟ್ರಿಬ್ಯೂಟರ್‌ಗಳನ್ನು ಅನಾವರಣಗೊಳಿಸಲಾಯಿತು.
ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮಕ್ಕೆ ಶ್ರೀ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು. ಹಾಸ್ಯ ರತ್ನ ಗಂಗಾವತಿ ಪ್ರಾಣೇಶ್, ನಟ ನವೀನ್ ಶಂಕರ್, ನಟಿ ಮಮತಾ ರಾವುತ್, ಕನ್ನಡ ಸೇನೆ ಅಧ್ಯಕ್ಷ ಕುಮಾರ್, ಚಾಣಕ್ಯ ಕ್ಯಾರಿಯರ್ ಅಕಾಡೆಮಿ ಸ್ಥಾಪಕ ಎನ್.ಎಂ. ಬಿರೆದಾರ್, ಬಸವರಾಜ ಮಹಾಮನಿ, ಲತಾ ಕುಂದರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿಗಳು, ತಮ್ಮ 75 ವರ್ಷಗಳ ಜೀವನದಲ್ಲಿ ಚಹಾ ಸೇವಿಸಿರಲಿಲ್ಲ. ಭಕ್ತ ಅರವಿಂದ ಪಾಟೀಲ್ ಅವರ ಒತ್ತಾಯದ ಮೇರೆಗೆ ಮೊದಲ ಬಾರಿಗೆ ‘ಸುರಕ್ಷ ಟೀ’ ಸೇವಿಸಿದ್ದು, ಅದರ ರುಚಿ ಇಷ್ಟವಾಗಿ ಅಂದಿನಿಂದ ಅದನ್ನೇ ಕುಡಿಯುತ್ತಿರುವುದಾಗಿ ಹೇಳಿದರು.
ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿರುವ ಕೆರ್ನಳ್ಳಿ ಈಶ್ವರ್, ‘ಸುರಕ್ಷ ಟೀ’ ಸಿನಿಮಾದಲ್ಲಿ ಕೇವಲ ಉತ್ಪನ್ನವಾಗಿ ಕಾಣಿಸಿಕೊಳ್ಳದೆ, ಒಂದು ಪಾತ್ರದಂತೆ ಕಥೆಯೊಳಗೆ ಬೆರೆತಿದೆ. ಚಿತ್ರೀಕರಣದಲ್ಲಿ ಇದನ್ನು ಬಳಸಲು ಅನುಮತಿ ನೀಡಿದ ಅರವಿಂದ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ನಾಯಕ ಡಾ. ಸಂಗಮೇಶ ಉಪಾಸೆ, ಉತ್ತರ ಕರ್ನಾಟಕದಲ್ಲಿ ಚಹಾ ಅಲ್ಲಿನ ಬದುಕಿನ ಅವಿಭಾಜ್ಯ ಭಾಗವಾಗಿದೆ. ಸಿನಿಮಾ ಆ ಭಾಗದ ಭಾಷೆ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಪ್ರತಿಬಿಂಬಿಸಲಿದೆ. ‘ಸುರಕ್ಷ ಟೀ’ ಕಥೆಯಲ್ಲಿ ಹೇಗೆ ಪ್ರಮುಖವಾಗುತ್ತದೆ ಎಂಬುದನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
‘ಸುರಕ್ಷ ಟೀ’ಗೆ ಸಹಕಾರ ನೀಡಿರುವ ಅರವಿಂದ ಪಾಟೀಲ್, ಗಂಗಾವತಿ ಪ್ರಾಣೇಶ್ ಅವರ ಪ್ರೇರಣೆಯಿಂದ ಉದ್ಯಮ ಆರಂಭಿಸಿದ್ದು, ಇದೀಗ ಫ್ರಾಂಚೈಸಿ ಮೂಲಕ ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಪದ್ಮಶ್ರೀ ಮಂಜಮ್ಮ ಜೋಗತಿ ಕೂಡ ಚಿತ್ರದ ಅನುಭವ ಹಂಚಿಕೊಂಡರು. ಉತ್ತರ ಕರ್ನಾಟಕದ ಆತಿಥ್ಯದಲ್ಲಿ ಚಹಾಕ್ಕಿರುವ ಮಹತ್ವವನ್ನು ನೆನಪಿಸಿಕೊಂಡ ಅವರು, ಸಿನಿಮಾದಲ್ಲಿ ತಾವು ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ‘ಸುರಕ್ಷ ಟೀ’ ಹಲವು ಸನ್ನಿವೇಶಗಳಲ್ಲಿ ಹಾಸುಹೊಕ್ಕಾಗಿದೆ ಎಂದರು.























