
ಬೆಂಗಳೂರು,ಅ.೯-ದೇಶದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ವಿದೇಶದಿಂದ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕ ಮೂಲದ ದಿ ತಿಮೋತಿ ಇನಿಶಿಯೇಟಿವ್ (ಟಿಟಿಐ) ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಸೇರಿದಂತೆ ಏಳು ಮಂದಿ ವಿರುದ್ಧ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಛತ್ತೀಸ್‌ಗಢ ರಾಜ್ಯಕ್ಕೆ ವರ್ಗಾಯಿಸಲಾಗಿದೆ.
ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಕೊತ್ತನೂರು ಪೊಲೀಸರು ಕಳೆದ ಜೂನ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಇದೇ ಸಂಸ್ಥೆ ಮತ್ತು ಆರೋಪಿಗಳ ವಿರುದ್ಧ ಮೇ ತಿಂಗಳಲ್ಲೇ ಛತ್ತೀಸ್‌ಗಢದ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿನ ಪೊಲೀಸರು ತನಿಖೆ ಆರಂಭಿಸಿದ್ದರು.
ವಿದೇಶದಿಂದ ಬಂದ ಹಣವನ್ನು ಆರೋಪಿಗಳು ಛತ್ತೀಸ್‌ಗಢದ ಬ್ಯಾಂಕ್‌ಗಳಲ್ಲಿ ಡ್ರಾ ಮಾಡಿಕೊಂಡು ಅಲ್ಲಿಯೇ ಖರ್ಚು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಎರಡೂ ರಾಜ್ಯಗಳ ಪೊಲೀಸರು ಒಂದೇ ಪ್ರಕರಣದ ತನಿಖೆ ನಡೆಸುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿಯ ಮೇರೆಗೆ ಪ್ರಕರಣವನ್ನು ಛತ್ತೀಸ್‌ಗಢಕ್ಕೆ ವರ್ಗಾಯಿಸಲಾಗಿದೆ. ಶೀಘ್ರದಲ್ಲೇ ಪ್ರಕರಣದ ಕಡತಗಳನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದ ಬೆಂಗಳೂರು ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ, ಅಷ್ಟರಲ್ಲಾಗಲೇ ಆರೋಪಿಗಳು ಪರಾರಿಯಾಗಿದ್ದರು. ಮತ್ತೊಂದೆಡೆ, ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗಿದ್ದು, ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.
ಆರೋಪಿಗಳು ಹಣಕಾಸು ವಹಿವಾಟು ನಡೆಸಿದ್ದ ಬ್ಯಾಂಕ್‌ನಿಂದಲೂ ಪೊಲೀಸರು ಮಾಹಿತಿ ಸಂಗ್ರಹಿಸಿ ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದರು. ಆರೋಪಿಗಳು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ ಕೂಡ ಹೊರಡಿಸಲಾಗಿತ್ತು.
ಈ ನಡುವೆ ಛತ್ತೀಸ್‌ಗಢ ಪೊಲೀಸರು ತನಿಖೆಯಲ್ಲಿ ಮುಂದುವರಿದಿದ್ದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕ ಮೂಲದ ಟಿಟಿಐ ಸಂಸ್ಥೆ ಹಾಗೂ ಕರ್ನಾಟಕದ ನಾಲ್ವರು ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ದೊಡ್ಡಗುಬ್ಬಿ ರಸ್ತೆಯ ಜೋನಾಥನ್ ಎಸ್. ರಾಜನ್, ಯಾದವ ಬಡಾವಣೆಯ ಮೀಕಾ ಮಾರ್ಕ್, ಕೊತ್ತನೂರಿನ ಅಜಿತ್ ವರ್ಗೀಸ್ ಮಥಾಯ್, ಛತ್ತೀಸ್‌ಗಢದ ವರ್ಗೀಸ್ ಚಾಕೋ, ಅಸ್ಸಾಂನ ಬಬ್ಲೂ ಕುರ್ಮಿ, ಮೈಸೂರಿನ ಸುಪ್ರೀಮ್ ಜಾಯ್ ಎಂದು ಗುರುತಿಸಲಾಗಿದೆ. ಅಮೆರಿಕದ ಟಿಟಿಐ ಸಂಸ್ಥೆಯನ್ನೂ ಪ್ರಕರಣದಲ್ಲಿ ಹೆಸರಿಸಲಾಗಿದೆ.
ಕಳೆದ ಏಪ್ರಿಲ್ ೧೮ ಮತ್ತು ೧೯ರಂದು ಆರೋಪಿಗಳಿಗೆ ಹಾಗೂ ಸಂಸ್ಥೆಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಟಿಟಿಐ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪಿಗಳು, ಅಮೆರಿಕದ ಟ್ರೂಯಿಸ್ಟ್ ಬ್ಯಾಂಕ್ ನೀಡಿದ್ದ ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಭಾರತದ ವಿವಿಧ ಎಟಿಎಂಗಳಿಂದ ಹಣ ಹಿಂಪಡೆದು ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು ಎಂದು ಇಡಿ ಆರೋಪಿಸಿದೆ.
ತನಿಖೆಯ ಪ್ರಕಾರ, ’ಸಂತೋಷ್ ಕುಮಾರ್’ ಎಂಬ ನಕಲಿ ಹೆಸರಿನಲ್ಲಿ ಅಮೆರಿಕದ ಟ್ರೂಯಿಸ್ಟ್ ಬ್ಯಾಂಕ್‌ನ ಸಾವಿರಕ್ಕೂ ಹೆಚ್ಚು ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ಭಾರತದಲ್ಲಿ ಅಕ್ರಮವಾಗಿ ವಿತರಿಸಿ, ಅವುಗಳ ಮೂಲಕ ಹಣ ಹಿಂಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.
೨೦೨೫ರ ನವೆಂಬರ್‌ನಿಂದ ೨೦೨೬ರ ಏಪ್ರಿಲ್‌ವರೆಗಿನ ಆರು ತಿಂಗಳ ಅವಧಿಯಲ್ಲಿ ಕಾನೂನುಬಾಹಿರವಾಗಿ ಸುಮಾರು ೯೨.೫೫ ಕೋಟಿ ರೂ. (೯೯,೯೫,೨೪೦ ಅಮೆರಿಕನ್ ಡಾಲರ್) ಹಣ ಬಳಕೆಯಾಗಿದೆ ಎಂದು ಇಡಿ ದೂರಿನಲ್ಲಿ ಉಲ್ಲೇಖಿಸಿದೆ.
ಇದಲ್ಲದೆ, ೨೦೨೪ರ ಜನವರಿಯಿಂದ ೨೦೨೬ರ ಮಾರ್ಚ್‌ವರೆಗೆ ಕರ್ನಾಟಕ, ಛತ್ತೀಸ್‌ಗಢ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಸುಮಾರು ೪೪ ಕೋಟಿ ರೂ. ಹಣ ಹಿಂಪಡೆಯಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಛತ್ತೀಸ್‌ಗಢದ ಧಮತರಿ ಮತ್ತು ಬಸ್ತಾರ್ ಸೇರಿದಂತೆ ಎಡಪಂಥೀಯ ತೀವ್ರವಾದ ಪೀಡಿತ ಪ್ರದೇಶಗಳಲ್ಲಿ ವಿದೇಶಿ ಡೆಬಿಟ್ ಕಾರ್ಡ್‌ಗಳ ಮೂಲಕ ಅನುಮಾನಾಸ್ಪದ ನಗದು ವಹಿವಾಟು ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಇಡಿ ತಿಳಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ ಸುಮಾರು ೬.೩೪ ಕೋಟಿ ರೂ. ಹಣ ಹಿಂಪಡೆಯಲಾಗಿದೆ ಎಂಬ ಆರೋಪವೂ ಇದೆ.
ಛತ್ತೀಸ್‌ಗಢದ ಧಮತರಿ ಪ್ರದೇಶದ ಬಾ ರಸ್ತೆಯ ವಿಜಯ್ ಪ್ಲಾಜಾದಲ್ಲಿರುವ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಟಿಎಂನಿಂದ ಎರಡು ಡೆಬಿಟ್ ಕಾರ್ಡ್‌ಗಳ ಮೂಲಕ ಸುಮಾರು ೩.೨ ಕೋಟಿ ರೂ. ಹಣ ಹಿಂಪಡೆಯಲಾಗಿದೆ. ತಲಾ ೧೦ ಸಾವಿರ ರೂ. ಮೊತ್ತದ ೩,೨೦೦ ವಹಿವಾಟುಗಳ ಮೂಲಕ ಈ ಹಣ ಡ್ರಾ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕ್ಷೇತ್ರಮಟ್ಟದ ಕಾರ್ಯಕರ್ತ ವರ್ಗೀಸ್ ಚಾಕೋ ಅವರ ಮೇಲ್ವಿಚಾರಣೆಯಲ್ಲಿ ಹಣ ಹಿಂಪಡೆಯಲಾಗಿದ್ದು, ಬಳಿಕ ಛತ್ತೀಸ್‌ಗಢದ ನಕ್ಸಲ್ ಪೀಡಿತ ಜಿಲ್ಲೆಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಇಡಿ ಆರೋಪಿಸಿದೆ.
ಆರೋಪಪಟ್ಟಿಯಲ್ಲಿರುವ ಜೋನಾಥನ್ ರಾಜನ್ ಭಾರತದಲ್ಲಿ ಟಿಟಿಐ ಸಂಸ್ಥೆಯ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಅಜಿತ್ ವರ್ಗೀಸ್ ಮಥಾಯ್ ಅವರೊಂದಿಗೆ ಸೇರಿ ಎಟಿಎಂಗಳಿಂದ ಹಣ ಹಿಂಪಡೆಯುವ ಕಾರ್ಯದಲ್ಲಿ ತೊಡಗಿದ್ದರು ಎಂಬ ಆರೋಪವೂ ಇದೆ.
ಭಾರತದಾದ್ಯಂತ ಸಂಸ್ಥೆಯ ತರಬೇತಿ, ಧರ್ಮೋಪದೇಶ ಕಾರ್ಯಕ್ರಮಗಳು, ತರಬೇತಿಗಾಗಿ ವ್ಯಕ್ತಿಗಳ ಆಯ್ಕೆ ಹಾಗೂ ಸ್ಥಳಗಳ ಗುರುತಿಸುವಿಕೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ವಿದೇಶಿ ಹಣ ಬಳಸಲಾಗಿದೆ ಎಂದು ಇಡಿ ದೂರಿನಲ್ಲಿ ಉಲ್ಲೇಖಿಸಿದೆ.
ವರ್ಗೀಸ್ ಚಾಕೋ, ಸುಪ್ರೀಮ್ ಜಾಯ್ ಮತ್ತು ಬಬ್ಲೂ ಕುರ್ಮಿ ಕ್ಷೇತ್ರಮಟ್ಟದ ಕಾರ್ಯಕರ್ತರಾಗಿದ್ದರು ಎಂದು ಆರೋಪಿಸಲಾಗಿದೆ. ಮೀಕಾ ಮಾರ್ಕ್ ಸಂಸ್ಥೆಯ ಭಾರತದ ಹಣಕಾಸು ಕಾರ್ಯಾಚರಣೆಗಳ ಪ್ರಮುಖ ವ್ಯಕ್ತಿಯಾಗಿದ್ದರು ಎಂಬ ಆರೋಪವೂ ಇದೆ.
ನಕ್ಸಲ್ ಚಟುವಟಿಕೆಗಳಿಗೆ ವಿದೇಶದಿಂದ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಟಿಐ ಸಂಸ್ಥೆ ಹಾಗೂ ಇತರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಛತ್ತೀಸ್‌ಗಢಕ್ಕೆ ವರ್ಗಾಯಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


























