
ಬಿಡುಗಡೆ ಹೊತ್ತಿನಲ್ಲಿ ಶೀರ್ಷಿಕೆ ಬದಲಿಸಿದ ಚಿತ್ರತಂಡ
ಬಿಡುಗಡೆಗೆ ಸಿದ್ಧವಾಗಿರುವ ಕೋಮಲ್ ಕುಮಾರ್ ಅಭಿನಯದ ‘ರೋಲೆಕ್ಸ್’ ಸಿನಿಮಾ ಇದೀಗ ಹೊಸ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರತಂಡವು ಚಿತ್ರದ ಶೀರ್ಷಿಕೆಯನ್ನು ‘ರಿಲಾಕ್ಸ್’ ಎಂದು ಬದಲಿಸಿದ್ದು, ಇದೇ ಹೆಸರಿನಲ್ಲಿ ಸಿನಿಮಾ ತೆರೆಕಾಣಲಿದೆ.
ಮಧು ಫಿಲಂ ಸರ್ಕ್ಯೂಟ್ಸ್ ಲಾಂಛನದಲ್ಲಿ ಅಂಬಟಿ ಮಧು ಮೋಹನ್ ನಿರ್ಮಿಸಿರುವ ಈ ಚಿತ್ರಕ್ಕೆ ಶ್ರೀನಿವಾಸ್ ಮಂಡ್ಯ ನಿರ್ದೇಶನ ಮಾಡಿದ್ದಾರೆ. ಕೋಮಲ್ ಕುಮಾರ್ ನಾಯಕನಾಗಿ ನಟಿಸಿದ್ದು, ಸೋನಾಲ್ ಮೊಂತೆರೊ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
‘ರೋಲೆಕ್ಸ್’ ಶೀರ್ಷಿಕೆ ಅಥವಾ ಅದಕ್ಕೆ ಸಂಬಂಧಿಸಿದ ಧ್ವನಿಯನ್ನು ಬಳಸಬಾರದು ಎಂದು ಹೆಸರಾಂತ ಸಂಸ್ಥೆಯೊಂದು ನೋಟಿಸ್ ನೀಡಿತ್ತು. ತಮ್ಮ ಚಿತ್ರದಲ್ಲಿ ಆ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಅಂಶವನ್ನು ಬಳಸಿಲ್ಲವಾದರೂ, ಬಿಡುಗಡೆ ಹಂತದಲ್ಲಿ ಶೀರ್ಷಿಕೆ ವಿಚಾರವಾಗಿ ಕಾನೂನು ಹೋರಾಟ ನಡೆಸಲು ಸಮಯವಿಲ್ಲ. ಹೀಗಾಗಿ ಶೀರ್ಷಿಕೆಗಿಂತ ಸಿನಿಮಾದ ಕಂಟೆಂಟ್ ಮುಖ್ಯ ಎಂಬ ನಿರ್ಧಾರಕ್ಕೆ ಬಂದಿರುವ ಚಿತ್ರತಂಡ, ‘ರೋಲೆಕ್ಸ್’ ಬದಲಿಗೆ ‘ರಿಲಾಕ್ಸ್’ ಎಂದು ಹೆಸರಿಟ್ಟಿದೆ.
ಚಿತ್ರದ ಟೀಸರ್ ಈಗಾಗಲೇ ಕುತೂಹಲ ಮೂಡಿಸಿದ್ದು, ನಿರೀಕ್ಷೆಗೂ ಮೀರಿದ ಮೆಚ್ಚುಗೆ ಪಡೆದುಕೊಂಡಿದೆ. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ‘ಕೆಜಿಎಫ್’ ಖ್ಯಾತಿಯ ನಂದು ಹಿನ್ನೆಲೆ ಸಂಗೀತ ನೀಡಿದ್ದಾರೆ.
ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ. ರಾಜೇಶ್ ವರ್ಮ ಕ್ರಿಯೇಟಿವ್ ಹೆಡ್ ಆಗಿ ಹಾಗೂ ಮುರಳಿಕೃಷ್ಣ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯದಲ್ಲೇ ‘ರಿಲಾಕ್ಸ್’ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.























