
ನವದೆಹಲಿ,ಅ.8-ಜಿಎಸ್‌ಟಿ ವ್ಯವಸ್ಥೆಯಲ್ಲಿ ತೆರಿಗೆದಾರರಿಗೆ ಮತ್ತಷ್ಟು ಸರಳತೆ ಹಾಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ. ಜಿಎಸ್‌ಟಿ ಅಧಿಕಾರಿಗಳಿಗೆ ತೆರಿಗೆದಾರರನ್ನು ಬಂಧಿಸುವ ಅಧಿಕಾರವನ್ನು ತೆಗೆದುಹಾಕಲು ಹಾಗೂ ಪ್ರಾಸಿಕ್ಯೂಷನ್‌ಗೆ ಅಗತ್ಯವಿರುವ ತೆರಿಗೆ ಮೊತ್ತದ ಮಿತಿಯನ್ನು 1 ಕೋಟಿಯಿಂದ 5 ಕೋಟಿಗೆ ಹೆಚ್ಚಿಸಲು 57ನೇ ಜಿಎಸ್‌ಟಿ ಮಂಡಳಿ ಸಭೆ ಶಿಫಾರಸು ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಪ್ರಮುಖ ತೆರಿಗೆ ಸುಧಾರಣೆಗಳಿಗೆ ಒಪ್ಪಿಗೆ ನೀಡಲಾಗಿದೆ. ಸಭೆಯಲ್ಲಿ ಯಾವುದೇ ಹೊಸ ಜಿಎಸ್‌ಟಿ ದರ ಪರಿಷ್ಕರಣೆ ಘೋಷಿಸಲಾಗಿಲ್ಲ.
ಜಿಎಸ್‌ಟಿ ಅಡಿಯಲ್ಲಿ ತೆರಿಗೆ ಸಂಬಂಧಿತ ಪ್ರಕರಣಗಳಲ್ಲಿ ಅಧಿಕಾರಿಗಳ ಬಂಧನ ಅಧಿಕಾರವನ್ನು ತೆಗೆದುಹಾಕಲು ಮಂಡಳಿ ಶಿಫಾರಸು ಮಾಡಿದೆ. ಜತೆಗೆ ಪ್ರಾಸಿಕ್ಯೂಷನ್ ಮಿತಿಯನ್ನು ?5 ಕೋಟಿಗೆ ಹೆಚ್ಚಿಸಲಾಗಿದೆ. ಹೀಗಾಗಿ ?5 ಕೋಟಿಗಿಂತ ಕಡಿಮೆ ಮೊತ್ತಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೊಸ ಮಿತಿಯಡಿ ಪ್ರಾಸಿಕ್ಯೂಷನ್ ನಡೆಯುವುದಿಲ್ಲ ಎಂದು ಸಚಿವೆ ಸ್ಪಷ್ಟಪಡಿಸಿದರು.
ಜಿಎಸ್‌ಟಿ ಅಪರಾಧಗಳಿಗೆ ಕಡ್ಡಾಯ ಕನಿಷ್ಠ ಶಿಕ್ಷೆಯನ್ನೂ ತೆಗೆದುಹಾಕಲು ನಿರ್ಧರಿಸಲಾಗಿದೆ. ಪ್ರಕರಣದ ಸ್ವರೂಪ ಹಾಗೂ ಪರಿಸ್ಥಿತಿಯನ್ನು ಪರಿಗಣಿಸಿ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನೂ ನ್ಯಾಯಾಲಯ ನಿರ್ಧರಿಸಲಿದೆ.
ನಿರ್ದಿಷ್ಟ ದಂಡದ ನಿಯಮ ಅನ್ವಯಿಸದ ಪ್ರಕರಣಗಳಲ್ಲಿ ವಿಧಿಸಲಾಗುತ್ತಿದ್ದ ಸಾಮಾನ್ಯ ದಂಡವನ್ನು 25,000ದಿಂದ 10,000ಕ್ಕೆ ಇಳಿಸಲಾಗಿದೆ. ರಿಟರ್ನ್ ಸಲ್ಲಿಕೆಯಲ್ಲಿ ವಿಳಂಬ, ತೆರಿಗೆ ಪಾವತಿಯಲ್ಲಿ ತಡ ಅಥವಾ ಇತರ ಸಣ್ಣಪುಟ್ಟ ತಪ್ಪುಗಳಿಗೆ ತೆರಿಗೆ ವಸೂಲಿ, ಬಡ್ಡಿ ಮತ್ತು ಪ್ರಮಾಣಾನುಗುಣ ದಂಡಕ್ಕೆ ಮಾತ್ರ ಸೀಮಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
10,000ಕ್ಕಿಂತ ಕಡಿಮೆ ಮೊತ್ತಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೋಕಾಸ್ ನೋಟಿಸ್ ನೀಡದಿರಲು ಕೂಡ ಮಂಡಳಿ ನಿರ್ಧರಿಸಿದೆ. ಇದರಿಂದ ಸಣ್ಣ ಪ್ರಮಾಣದ ಪ್ರಕರಣಗಳಲ್ಲಿ ಅನಗತ್ಯ ವ್ಯಾಜ್ಯ ಕಡಿಮೆಯಾಗುವ ನಿರೀಕ್ಷೆ ಇದೆ.
ರಿಫಂಡ್ ಅರ್ಜಿಯ ಸ್ವೀಕೃತಿ ದೃಢೀಕರಿಸುವ ಅವಧಿಯನ್ನು 15 ದಿನಗಳಿಂದ 10 ದಿನಗಳಿಗೆ ಇಳಿಸಲಾಗಿದೆ. 10 ದಿನಗಳೊಳಗೆ ಸ್ವೀಕೃತಿ ಅಥವಾ ಕೊರತೆ ಸೂಚಿಸುವ ಮೆಮೊ ನೀಡದಿದ್ದರೆ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.
ಅಪಾಯ ಮೌಲ್ಯಮಾಪನದ ಆಧಾರದ ಮೇಲೆ ರಿಫಂಡ್ ಮೊತ್ತದ ಶೇ.90ರಷ್ಟು ಹಣವನ್ನು ಮಂಜೂರು ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದ್ದು, ಸ್ವೀಕೃತಿ ಬಳಿಕ ಮೂರು ಕೆಲಸದ ದಿನಗಳೊಳಗೆ ಆದೇಶ ಹೊರಡಿಸುವ ವ್ಯವಸ್ಥೆ ಬರಲಿದೆ. ಇದುವರೆಗೆ ಈ ಪ್ರಕ್ರಿಯೆಗೆ ಏಳು ದಿನಗಳ ಕಾಲಾವಕಾಶವಿತ್ತು. ಕ್ಯಾಶ್ ಲೆಡ್ಜರ್‌ನಲ್ಲಿರುವ ಹೆಚ್ಚುವರಿ ಮೊತ್ತದ ರಿಫಂಡ್ ಅನ್ನು ಅಧಿಕಾರಿಗಳ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿ ನೀಡಲು ನಿರ್ಧರಿಸಲಾಗಿದೆ.
ಕಡಿಮೆ ಅಪಾಯದ ಅರ್ಜಿದಾರರಿಗೆ ಮೂರು ಕೆಲಸದ ದಿನಗಳೊಳಗೆ ಸ್ವಯಂಚಾಲಿತ ಜಿಎಸ್‌ಟಿ ನೋಂದಣಿ ನೀಡುವ ವ್ಯವಸ್ಥೆ ಮುಂದುವರಿಯಲಿದೆ. ನೋಂದಾಯಿತ ವ್ಯಕ್ತಿಗಳಿಗೆ ಸರಬರಾಜು ಮಾಡುವುದರಿಂದ ತಿಂಗಳಿಗೆ 2.5 ಲಕ್ಷ ಮೀರದ ಔಟ್‌ಪುಟ್ ತೆರಿಗೆ ಇರುವ ಅರ್ಜಿದಾರರಿಗೂ ಈ ಸೌಲಭ್ಯ ವಿಸ್ತರಿಸಲಿದೆ.ಪ್ರಸ್ತುತ ಸುಮಾರು ಶೇ.61ರಷ್ಟು ಜಿಎಸ್‌ಟಿ ನೋಂದಣಿಗಳು ಸ್ವಯಂಚಾಲಿತ ಮಾರ್ಗದಲ್ಲೇ ನಡೆಯುತ್ತಿವೆ.
ವಾರ್ಷಿಕ ವಹಿವಾಟು 5 ಕೋಟಿವರೆಗೆ ಇದ್ದು, ಕೇವಲ ಗ್ರಾಹಕರಿಗೆ ಸರಕು ಅಥವಾ ಸೇವೆ ಒದಗಿಸುವ ತೆರಿಗೆದಾರರಿಗೆ ಹೊಸ ಐಚ್ಛಿಕ ಅನುಸರಣೆ ವ್ಯವಸ್ಥೆ ಜಾರಿಗೆ ತರಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದರಡಿ ವರ್ಷಕ್ಕೊಮ್ಮೆ ರಿಟರ್ನ್ ಸಲ್ಲಿಸಿ, ತ್ರೈಮಾಸಿಕವಾಗಿ ತೆರಿಗೆ ಪಾವತಿಸುವ ಅವಕಾಶ ಕಲ್ಪಿಸುವ ಉದ್ದೇಶವಿದೆ.
ಈ ವ್ಯವಸ್ಥೆಯ ಸಂಪೂರ್ಣ ರೂಪುರೇಷೆ ಹಾಗೂ ಅಗತ್ಯ ಕಾನೂನು ತಿದ್ದುಪಡಿಗಳನ್ನು ಮುಂದಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಂಡಿಸಲಾಗುವುದು.
























