Home ಮುಖಪುಟ ಸುದ್ದಿ ಎಸ್ ಐಆರ್ ನಕಲಿ ಪ್ರಮಾಣ ಪತ್ರ ಲಗತ್ತಿಸಿದ ಆರೋಪ: ಶಾಸಕ ಯತ್ನಾಳ್ ಸೇರಿ ಮೂವರ ವಿರುದ್ಧ...

ಎಸ್ ಐಆರ್ ನಕಲಿ ಪ್ರಮಾಣ ಪತ್ರ ಲಗತ್ತಿಸಿದ ಆರೋಪ: ಶಾಸಕ ಯತ್ನಾಳ್ ಸೇರಿ ಮೂವರ ವಿರುದ್ಧ ಎಫ್ ಐಆರ್

ವಿಜಯಪುರ, ಅ.8-ಜೀವಂತವಾಗಿರುವ ಎಂಟು ಮತದಾರರು ಮೃತಪಟ್ಟಿದ್ದಾರೆ ಎಂಬ ಕಾರಣ ನೀಡಿ, ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಶಾಸಕರ ಲೆಟರ್‌ಹೆಡ್’ನಲ್ಲೇ ಅರ್ಜಿ ಸಲ್ಲಿಸಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.


ನಗರದ ಬಾಗವಾನ್ ಕಾಲೋನಿ ನಿವಾಸಿ ಅಬ್ದುಲ್ ರಝಾಕ್ ಮೌಲಾಸಾಬ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾವು ಜೀವಂತವಾಗಿದ್ದರೂ ತಮ್ಮನ್ನು ಸೇರಿದಂತೆ ಇನ್ನಿತರ ಜೀವಂತ ವ್ಯಕ್ತಿಗಳನ್ನು ಮೃತಪಟ್ಟಿದ್ದಾರೆ ಎಂದು ಬಿಂಬಿಸಿ ನಕಲಿ ಮರಣ ಪ್ರಮಾಣಪತ್ರಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.


ಕಳೆದ ಸೆಪ್ಟೆಂಬರ್ 3ರಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ಬೆಂಬಲಿಗರು ಈ ಮರಣ ಪ್ರಮಾಣಪತ್ರಗಳನ್ನು ವಿಜಯಪುರ ನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ್ದರು.


ಈ ದಾಖಲೆಗಳ ಆಧಾರದಲ್ಲಿ ಸಂಬಂಧಪಟ್ಟ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಮನವಿ ಮಾಡಲಾಗಿತ್ತು. ಈ ಮನವಿಯನ್ನು ಶಾಸಕರ ಲೆಟರ್‌ಹೆಡ್‌ನಲ್ಲೇ ಸಲ್ಲಿಸಲಾಗಿತ್ತು ಎಂಬುದು ದೂರಿನಲ್ಲಿರುವ ಪ್ರಮುಖ ಆರೋಪವಾಗಿದೆ.


ನಾವು ಜೀವಂತವಾಗಿದ್ದೇವೆ’ ಎಂದ ಮೂವರು ಮಹಿಳೆಯರು, ಈ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಕ್ಕಿದ್ದು, ಮೃತಪಟ್ಟಿದ್ದಾರೆ ಎಂದು ದಾಖಲೆಗಳಲ್ಲಿ ಬಿಂಬಿಸಲಾಗಿದ್ದ ಮೂವರು ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.


ವಿಜಯಪುರ ನಗರದ ಮೂವರು ಮಹಿಳೆಯರು ತಾವು ಜೀವಂತವಾಗಿದ್ದು, ತಮ್ಮ ಹೆಸರುಗಳನ್ನು ‘ಡೆಡ್ ವೋಟರ್ಸ್’ ಪಟ್ಟಿಯಲ್ಲಿ ಸೇರಿಸಿರುವುದು ಹೇಗೆ ಎಂಬ ಪ್ರಶ್ನೆ ಎತ್ತಿದ್ದಾರೆ.