
ಬೆಂಗಳೂರು,ಅ.೧೩- ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮತ್ತೊಂದು ಮಹತ್ವದ ಮಾಹಿತಿ ಲಭ್ಯವಾಗಿದೆ.
ಅಭ್ಯರ್ಥಿಗಳ ಮೆರಿಟ್ ಪಟ್ಟಿಯಲ್ಲಿರುವ ಅಂಕಗಳು ಹಾಗೂ ಅಂತಿಮ ಆಯ್ಕೆಯಾಗುವ ಸಾಧ್ಯತೆಯ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು, ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪ ಬೆಳಕಿಗೆ ಬಂದಿದೆ.
ಕೆಪಿಎಸ್ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರ ವಿಚಾರಣೆ ವೇಳೆ ಈ ಅಕ್ರಮದ ಕುರಿತು ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ. ಜ್ಞಾನೇಂದ್ರ ಮಾತ್ರವಲ್ಲದೆ, ಇತರ ಅಧಿಕಾರಿಗಳು ಹಾಗೂ ಕೆಪಿಎಸ್ಸಿಯ ಕೆಲವು ಸದಸ್ಯರೂ ಈ ಅಕ್ರಮದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಕೇಳಿಬಂದಿದೆ.
ಪರೀಕ್ಷೆ ಮುಗಿದ ಬಳಿಕ ೧:೩ ಅನುಪಾತದಲ್ಲಿ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಅಂಕಗಳು ಮತ್ತು ಅಂತಿಮ ಆಯ್ಕೆಯ ಸಾಧ್ಯತೆಯ ಕುರಿತ ಮಾಹಿತಿ ಗೌಪ್ಯವಾಗಿರಬೇಕಿತ್ತು. ಆದರೆ, ಈ ಮಾಹಿತಿಯನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ತನಿಖೆಯ ಪ್ರಕಾರ, ಕೆಪಿಎಸ್ಸಿಯ ಕೆಲವು ಸದಸ್ಯರು ಮತ್ತು ಅಧಿಕಾರಿಗಳು ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ, ಮೆರಿಟ್ ಪಟ್ಟಿಯಲ್ಲಿ ಯಾವ ಅಭ್ಯರ್ಥಿಗೆ ಎಷ್ಟು ಅಂಕಗಳಿವೆ ಹಾಗೂ ಯಾರಿಗೆ ಅಂತಿಮ ಆಯ್ಕೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಪಡೆಯುತ್ತಿದ್ದರು ಎನ್ನಲಾಗಿದೆ.
ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಅಂತಿಮ ಆಯ್ಕೆಯಾಗುವ ಸಾಧ್ಯತೆಯಿದ್ದ ಅಭ್ಯರ್ಥಿಗಳನ್ನೂ ಹಣ ವಸೂಲಿಗಾಗಿ ಗುರಿಯಾಗಿಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ, ತಮ್ಮ ಪ್ರಭಾವದಿಂದಲೇ ಆಯ್ಕೆ ಸಾಧ್ಯವಾಗುತ್ತಿದೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗುತ್ತಿತ್ತು ಎನ್ನಲಾಗಿದೆ. ಅಭ್ಯರ್ಥಿಗಳಿಗೆ ಈಗಾಗಲೇ ಉತ್ತಮ ಅಂಕಗಳು ಬಂದಿದ್ದು, ಅಂತಿಮ ಆಯ್ಕೆಯಾಗುವ ಸಾಧ್ಯತೆಯಿದೆ ಎಂಬುದು ತಿಳಿದಿದ್ದರೂ, ಆ ಯಶಸ್ಸಿಗೆ ತಾವೇ ಕಾರಣ ಎಂದು ಹೇಳಿಕೊಂಡು ಹಣ ಪಡೆಯಲಾಗುತ್ತಿತ್ತು ಎಂಬ ಆರೋಪವಿದೆ.
ಮೆರಿಟ್ ಪಟ್ಟಿಯನ್ನು ಕೆಪಿಎಸ್ಸಿಯ ಕಂಪ್ಯೂಟರ್ ವಿಭಾಗ, ಸಿ-೩ ವಿಭಾಗ ಹಾಗೂ ಕಾರ್ಯದರ್ಶಿಗಳ ಕಚೇರಿಗೆ ಕಳುಹಿಸಲಾಗುತ್ತಿತ್ತು. ಈ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಅಧಿಕಾರಿಗಳು ಪಟ್ಟಿಯಲ್ಲಿನ ಗೌಪ್ಯ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಕೆಪಿಎಸ್ಸಿಯ ಕೆಲವು ಸದಸ್ಯರಿಗೆ ಅಭ್ಯರ್ಥಿಗಳ ಆಯ್ಕೆಯ ಸಾಧ್ಯತೆಯ ಕುರಿತು ಮಾಹಿತಿ ನೀಡಲಾಗುತ್ತಿತ್ತು ಎನ್ನಲಾಗಿದೆ. ಹಣ ನೀಡಲು ಒಪ್ಪಿಕೊಂಡಿದ್ದ ಅಭ್ಯರ್ಥಿಗಳೊಂದಿಗೂ ಈ ಮಾಹಿತಿ ಹಂಚಿಕೊಳ್ಳಲಾಗುತ್ತಿತ್ತು. ಬಳಿಕ ನೇಮಕಾತಿ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪ ತನಿಖೆಯ ವೇಳೆ ಮುನ್ನೆಲೆಗೆ ಬಂದಿದೆ.
ಈ ರೀತಿಯಲ್ಲಿ ಹಣ ನೀಡಿ ವಂಚನೆಗೆ ಒಳಗಾದ ಅಭ್ಯರ್ಥಿಗಳು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಪಿಎಸ್ಸಿ ನೇಮಕಾತಿ ಹಗರಣದ ತನಿಖೆಯಲ್ಲಿ ಮೆರಿಟ್ ಪಟ್ಟಿಯ ಗೌಪ್ಯ ಮಾಹಿತಿಯನ್ನು ಯಾರು ಸೋರಿಕೆ ಮಾಡಿದರು, ಈ ಮಾಹಿತಿಯನ್ನು ಬಳಸಿಕೊಂಡು ಹಣ ವಸೂಲಿ ಮಾಡಿದವರು ಯಾರು ಹಾಗೂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಸದಸ್ಯರು ಎಷ್ಟು ಮಂದಿ ಎಂಬುದನ್ನು ಪತ್ತೆಹಚ್ಚುವುದು ಇ.ಡಿ.ಗೆ ಪ್ರಮುಖ ಸವಾಲಾಗಿದೆ.
ತನಿಖೆ ಮುಂದುವರಿದಂತೆ ಹಗರಣದ ಮತ್ತಷ್ಟು ವಿವರಗಳು ಬಹಿರಂಗವಾಗುವ ಸಾಧ್ಯತೆಯಿದೆ.
























