Home ಮುಖಪುಟ ಸುದ್ದಿ ಜಪಾನ್‌ನ ತ್ಯಾಜ್ಯದಿಂದ ವಿದ್ಯುತ್ ಕರ್ನಾಟಕದಿಂದ ಅಧ್ಯಯನ

ಜಪಾನ್‌ನ ತ್ಯಾಜ್ಯದಿಂದ ವಿದ್ಯುತ್ ಕರ್ನಾಟಕದಿಂದ ಅಧ್ಯಯನ

ಒಸಾಕಾ (ಜಪಾನ್), ನ. ೨೪- ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಘನತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ಹಾಗೂ ಸುಸ್ಥಿರ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಜಪಾನ್‌ನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಮಾದರಿಯನ್ನು ಅಧ್ಯಯನ ಮಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನಿಯೋಗದೊಂದಿಗೆ ಜಪಾನ್‌ನ ಒಸಾಕಾದಲ್ಲಿರುವ ಮೈಶಿಮಾ ಇನ್ಸಿನರೇಷನ್ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ತಂತ್ರಜ್ಞಾನ ಮತ್ತು ವಿದ್ಯುತ್ ಉತ್ಪಾದನಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ಮೈಶಿಮಾ ದ್ವೀಪದಲ್ಲಿರುವ ಈ ಘಟಕ ೨೦೦೧ರಿಂದ ಕಾರ್ಯನಿರ್ವಹಿಸುತ್ತಿದ್ದು, ಎರಡು ಇನ್ಸಿನರೇಟರ್‌ಗಳ ಮೂಲಕ ಪ್ರತಿದಿನ ಸುಮಾರು ೯೦೦ ಟನ್ ಪೌರ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಘಟಕದಲ್ಲಿ ೩೨ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದು, ಸಂಸ್ಕರಿಸಿದ ತ್ಯಾಜ್ಯದಿಂದ ಉತ್ಪಾದನೆಯಾಗುವ ವಿದ್ಯುತ್ ಘಟಕದ ಸ್ವಂತ ಅಗತ್ಯಗಳನ್ನು ಪೂರೈಸುವುದರ ಜತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಪೂರೈಸಲಾಗುತ್ತದೆ.

ತ್ಯಾಜ್ಯ ದಹನ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿಯಂತ್ರಿಸುವ ಅತ್ಯಾಧುನಿಕ ವ್ಯವಸ್ಥೆ, ನಿರಂತರ ಮಾಲಿನ್ಯ ಮೇಲ್ವಿಚಾರಣೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಸುಧಾರಿತ ತಂತ್ರಜ್ಞಾನಗಳನ್ನು ಇಲ್ಲಿ ಅಳವಡಿಸಲಾಗಿದೆ. ಇದರಿಂದ ತ್ಯಾಜ್ಯ ಸಂಸ್ಕರಣೆಯ ದಕ್ಷತೆಯನ್ನು ಹೆಚ್ಚಿಸುವುದರ ಜತೆಗೆ ಪರಿಸರದ ಮೇಲಿನ ದುಷ್ಪರಿಣಾಮಗಳನ್ನು ಕನಿಷ್ಠಗೊಳಿಸಲು ಸಾಧ್ಯವಾಗಿದೆ.
ಈ ಘಟಕ ತಂತ್ರಜ್ಞಾನಕ್ಕೆ ಮಾತ್ರವಲ್ಲದೆ ವಿಶಿಷ್ಟ ವಾಸ್ತುಶಿಲ್ಪಕ್ಕೂ ಹೆಸರುವಾಸಿಯಾಗಿದೆ. ಖ್ಯಾತ ಆಸ್ಟ್ರಿಯನ್ ಕಲಾವಿದ ಫ್ರೀಡೆನ್ಸ್‌ರೈಚ್ ಹಂಡರ್‌ಟ್‌ವಾಸರ್ ವಿನ್ಯಾಸಗೊಳಿಸಿರುವ ಈ ಘಟಕವು ವರ್ಣರಂಜಿತ ಹೊರಾಂಗಣ, ವಿಭಿನ್ನ ವಾಸ್ತುಶಿಲ್ಪ ವಿನ್ಯಾಸ ಹಾಗೂ ಹಸಿರು ಪರಿಸರದಿಂದ ಗಮನ ಸೆಳೆಯುತ್ತದೆ.

ಕೈಗಾರಿಕಾ ಮೂಲಸೌಕರ್ಯದಲ್ಲಿಯೂ ಕಲೆ, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ವಿನ್ಯಾಸವನ್ನು ಹೇಗೆ ಅಳವಡಿಸಬಹುದು ಎಂಬುದಕ್ಕೆ ಈ ಘಟಕ ಉತ್ತಮ ಉದಾಹರಣೆಯಾಗಿದೆ.

ಕರ್ನಾಟಕದ ನಗರಾಭಿವೃದ್ಧಿ, ಮೂಲಸೌಕರ್ಯ ಹಾಗೂ ಪರಿಸರ ನಿರ್ವಹಣಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿರುವ ಮಾದರಿಗಳನ್ನು ಅಧ್ಯಯನ ಮಾಡುತ್ತಿದೆ. ಈ ಭೇಟಿಯ ಮೂಲಕ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಹಾಗೂ ಸುಸ್ಥಿರ ನಗರ ನಿರ್ವಹಣೆಗೆ ಅಗತ್ಯವಾದ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ.

ಜಪಾನ್‌ನ ಈ ಮಾದರಿಯಿಂದ ಸೂಕ್ತ ಪಾಠಗಳನ್ನು ಅಳವಡಿಸಿಕೊಳ್ಳುವ ಮೂಲಕ ಕರ್ನಾಟಕದ ನಗರಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಗೊಳಿಸುವುದು, ಪರಿಸರ ಸ್ನೇಹಿ ತಂತ್ರಜ್ಞಾನಕ್ಕೆ ಉತ್ತೇಜನ ನೀಡುವುದು ಹಾಗೂ ಸ್ವಚ್ಛ, ಸುಂದರ ಮತ್ತು ವಾಸಯೋಗ್ಯ ನಗರಗಳನ್ನು ನಿರ್ಮಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.