
ಮಂಡ್ಯ,ಜು.೫- ಕಾವೇರಿ ಜಲಾನಯನ ಪ್ರದೇಶದ ಕೆಲವೆಡೆ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಬರುವ ನೀರಿನ ಪ್ರಮಾಣದಲ್ಲಿ ಅಲ್ಪಮಟ್ಟದ ಏರಿಕೆ ಕಂಡುಬಂದಿದೆ. ಈ ಮೂಲಕ ಬರೊಬ್ಬರಿ ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಕೆಆರ್‌ಎಸ್ ಜಲಾಶಯಕ್ಕೆ ಒಂದು ಸಾವಿರ ಕ್ಯೂಸೆಕ್ ನೀರು ಒಳಹರಿವು ಹರಿದುಬಂದಿದೆ.
ಹಳೆ ಮೈಸೂರು ಭಾಗದ ಜೀವನಾಡಿಯಾದ ಕೆಆರ್‌ಎಸ್ ಜಲಾಶಯಕ್ಕೆ ೧,೪೪೯ ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಜಲಾಶಯದಿಂದ ೭೬೦ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ೧೨೪.೮೦ ಗರಿಷ್ಠ ಮಟ್ಟದ ಕೆಆರ್‌ಎಸ್ ಸದ್ಯ ಜಲಾಶಯದ ನೀರಿನ ಮಟ್ಟ ೮೦.೯೦ ಅಡಿಗೆ ತಲುಪಿದೆ. ಇನ್ನೂ ೪೯.೪೫೨ ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಈಗ ೧೧.೧೮೮ ಟಿಎಂಸಿ ನೀರಿದ್ದು, ಇದರಲ್ಲಿ ೫ ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ.
ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಈ ಬಾರಿಯ ಪರಿಸ್ಥಿತಿ ತೀರಾ ಆತಂಕಕಾರಿಯಾಗಿದೆ.ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ ಬರೋಬ್ಬರಿ ೨೫,೭೫೭ ಕ್ಯೂಸೆಕ್ ಒಳಹರಿವು ಇತ್ತು. ಅಷ್ಟೇ ಅಲ್ಲದೆ, ಜಲಾಶಯ ಭರ್ತಿಯಾಗಿ ಭೋರ್ಗರೆಯುತ್ತಾ ೪೦ ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ನದಿಗೆ ಹರಿಸಲಾಗಿತ್ತು.ಆದರೆ ಈ ವರ್ಷ ಮುಂಗಾರು ಕೈಕೊಟ್ಟಿರುವುದರಿಂದ ಜಲಾಶಯದ ಸುತ್ತ ಮುತ್ತ ಬರದ ಛಾಯೆ ಆವರಿಸಿದೆ.
































