Home ಮುಖಪುಟ ಸುದ್ದಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವನಾಯಕರ ಪ್ರಶಂಸೆ

ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವನಾಯಕರ ಪ್ರಶಂಸೆ

ನವದೆಹಲಿ/ಟೆಲ್ ಅವೀವ್, ಅ. ೧: ಆಕಾಶದಲ್ಲೇ ಪೈಲಟ್‌ಗಳ ನಡುವೆ ನಡೆದ ಭೀಕರ ಸಂಘರ್ಷದ ವೇಳೆ ಅಪಾರ ಧೈರ್ಯ, ಸಮಯಪ್ರಜ್ಞೆ ಪ್ರದರ್ಶಿಸಿ ೧೭೪ ಪ್ರಯಾಣಿಕರ ಜೀವ ಉಳಿಸಲು ನೆರವಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ಈZ೧೦೭೩ ವಿಮಾನದಲ್ಲಿ ಬುಧವಾರ ಈ ಆತಂಕಕಾರಿ ಘಟನೆ ನಡೆದಿದೆ. ವಿಮಾನದಲ್ಲಿ ೧೭೪ ಮಂದಿ ಇದ್ದರು. ವರದಿಗಳ ಪ್ರಕಾರ, ವಿಮಾನ ಸುಮಾರು ೩೪ ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಸಹ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ದಾಳಿಯ ಬಳಿಕ ವಿಮಾನ ನಿಯಂತ್ರಣ ಕಳೆದುಕೊಂಡು ಅತಿ ವೇಗದಲ್ಲಿ ಕೆಳಕ್ಕೆ ಇಳಿಯತೊಡಗಿತ್ತು.

ವಿಮಾನ ಕೆಲವೇ ನಿಮಿಷಗಳಲ್ಲಿ ಸುಮಾರು ೧೭ ಸಾವಿರ ಅಡಿ ಕೆಳಕ್ಕೆ ಕುಸಿದಿತ್ತು. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿರುವುದನ್ನು ಅರಿತ ಪ್ರಯಾಣಿಕರಲ್ಲಿ ಕೆಲವರು ಕಾಕ್‌ಪಿಟ್‌ನತ್ತ ಧಾವಿಸಿದರು. ಗಂಭೀರವಾಗಿ ಗಾಯಗೊಂಡಿದ್ದರೂ ಸ್ಮಿತ್ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆಯಲು ಸಾಧ್ಯವಾಗುವಂತೆ ಕ್ರಮ ಕೈಗೊಂಡರು. ಇದರಿಂದ ಪ್ರಯಾಣಿಕರು ಒಳನುಗ್ಗಿ ದಾಳಿ ನಡೆಸುತ್ತಿದ್ದ ಸಹ ಪೈಲಟ್‌ನನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ವರದಿಗಳು ತಿಳಿಸಿವೆ.

ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದತ್ತ ತಿರುಗಿಸಲಾಯಿತು. ಅಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲ್ಪಟ್ಟರು. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಮೋದಿ: ಸ್ಮಿತ್ ಮಚ್ಚರ್ ಹೀರೋ
ಭಾರತೀಯ ಪೈಲಟ್‌ನ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಅತ್ಯಂತ ಗಂಭೀರ ಅಪಾಯದ ನಡುವೆಯೂ ಗಾಯಗೊಂಡ ಸ್ಥಿತಿಯಲ್ಲಿ ಇತರರ ಜೀವ ರಕ್ಷಿಸಲು ಸ್ಮಿತ್ ಮಚ್ಚರ್ ತೋರಿದ ಧೈರ್ಯ ಮತ್ತು ದೃಢಸಂಕಲ್ಪ ಅಪಾರ ಎಂದು ಹೇಳಿದ್ದಾರೆ.

ಅವರ ಸಾಹಸದಿಂದ ನೂರಾರು ಜೀವಗಳು ಉಳಿದಿದ್ದು, ಭಾರಿ ದುರಂತವೊಂದು ತಪ್ಪಿದೆ ಎಂದು ಮೋದಿ ಹೇಳಿದ್ದಾರೆ. ಭಾರತ ಸ್ಮಿತ್ ಮಚ್ಚರ್ ಬಗ್ಗೆ ಹೆಮ್ಮೆಪಡುತ್ತದೆ ಎಂದು ತಿಳಿಸಿ, ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ನೆತನ್ಯಾಹು: ನಿಜವಾದ ಹೀರೋ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಸ್ಮಿತ್ ಮಚ್ಚರ್ ಅವರನ್ನು ಶ್ಲಾಘಿಸಿದ್ದಾರೆ. ಗಾಯಗೊಂಡಿದ್ದರೂ ದಾಳಿಕೋರನ ವಿರುದ್ಧ ಪ್ರತಿರೋಧ ತೋರಿಸಿ ಕಾಕ್‌ಪಿಟ್ ಬಾಗಿಲು ತೆರೆಯುವ ಮೂಲಕ ಪ್ರಯಾಣಿಕರಿಗೆ ಒಳಬರಲು ಅವಕಾಶ ಮಾಡಿಕೊಟ್ಟರು ಎಂದು ನೆತನ್ಯಾಹು ಹೇಳಿದ್ದಾರೆ.

ಈ ಕ್ರಮದಿಂದ ಪ್ರಯಾಣಿಕರು ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು ಮತ್ತು ೧೭೪ ಮಂದಿಯ ಜೀವ ಉಳಿಯಿತು ಎಂದು ಅವರು ಹೇಳಿದ್ದಾರೆ. ಸ್ಮಿತ್ ಮಚ್ಚರ್ ಅವರನ್ನು ನಿಜವಾದ ಹೀರೋ ಎಂದು ಕರೆದ ನೆತನ್ಯಾಹು, ಅವರು ಶೀಘ್ರ ಹಾಗೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಟ್ರಂಪ್ ಕೂಡ ಮೆಚ್ಚುಗೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಘಟನೆಯಲ್ಲಿ ಸ್ಮಿತ್ ಮಚ್ಚರ್ ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಟ್ರಂಪ್, ದಾಳಿಯಿಂದ ಗಾಯಗೊಂಡಿದ್ದರೂ ಪರಿಸ್ಥಿತಿಯನ್ನು ಎದುರಿಸಿದ ಪೈಲಟ್‌ರನ್ನು ಹೀರೋ ಎಂದು ಬಣ್ಣಿಸಿದ್ದಾರೆ.
ವಿಮಾನ ತೀವ್ರವಾಗಿ ಕೆಳಕ್ಕೆ ಕುಸಿಯುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರು ಹಾಗೂ ಇತರರು ಕಾಕ್‌ಪಿಟ್‌ಗೆ ತೆರಳಿ ವಿಮಾನವನ್ನು ನಿಯಂತ್ರಣಕ್ಕೆ ತರಲು ನೆರವಾದ ಘಟನೆಯನ್ನೂ ಟ್ರಂಪ್ ಉಲ್ಲೇಖಿಸಿದ್ದಾರೆ.

೧೩ ವರ್ಷಗಳ ಅನುಭವದ ಪೈಲಟ್
ವರದಿಗಳ ಪ್ರಕಾರ, ಸ್ಮಿತ್ ಮಚ್ಚರ್ ದುಬೈನಲ್ಲಿ ವಾಸಿಸುತ್ತಿದ್ದು ಸುಮಾರು ೧೩ ವರ್ಷಗಳ ಪೈಲಟ್ ಅನುಭವ ಹೊಂದಿದ್ದಾರೆ. ಫ್ಲೈದುಬೈನಲ್ಲಿ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಫ್ಲೈದುಬೈ ಸಂಸ್ಥೆ ಈವರೆಗೆ ಪೈಲಟ್‌ಗಳ ಗುರುತು ಅಥವಾ ಘಟನೆಯ ಹಿಂದಿನ ಉದ್ದೇಶದ ಕುರಿತು ಸಂಪೂರ್ಣ ವಿವರವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಸ್ಮಿತ್ ಮಚ್ಚರ್ ಅವರ ಪ್ರತಿರೋಧದ ಜೊತೆಗೆ ವಿಮಾನದಲ್ಲಿದ್ದ ಪ್ರಯಾಣಿಕರ ತಕ್ಷಣದ ಪ್ರತಿಕ್ರಿಯೆಯೂ ದುರಂತ ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೆಲ ಪ್ರಯಾಣಿಕರು ಕಾಕ್‌ಪಿಟ್ ಪ್ರವೇಶಿಸಿ ದಾಳಿಕೋರನನ್ನು ಹಿಡಿದು ನಿಯಂತ್ರಿಸಿದರು. ವಿಮಾನದಲ್ಲಿದ್ದ ದಂತವೈದ್ಯರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದ ಸ್ಮಿತ್ ಮಚ್ಚರ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು.

ಘಟನೆಯ ಬಳಿಕ ವಿಮಾನ ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತು. ಬಳಿಕ ಪ್ರಯಾಣಿಕರನ್ನು ಮತ್ತೊಂದು ವಿಮಾನದ ಮೂಲಕ ಇಸ್ರೇಲ್‌ಗೆ ಕರೆದೊಯ್ಯಲಾಯಿತು.

ಕಾಕ್‌ಪಿಟ್‌ನೊಳಗೇ ಪೈಲಟ್ ಮೇಲೆ ದಾಳಿ ನಡೆದಿರುವುದು ವಿಮಾನಯಾನ ಭದ್ರತೆ ಕುರಿತು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಘಟನೆಯ ಹಿಂದಿನ ಉದ್ದೇಶವೇನು ಎಂಬುದು ತನಿಖೆಯಿಂದ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಫ್ಲೈದುಬೈ ಘಟನೆ ಕುರಿತು ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದೆ.