
ಬೆಂಗಳೂರು,ಅ.೧-ಸ್ಯಾಂಡಲ್‌ವುಡ್ ನಟಿ ನಿವೃತ್ತ ಡಿಜಿಪಿ ರಾಮಚಂದ್ರರಾವ್ ಮಲಮಗಳು ರನ್ಯಾ ರಾವ್ ವಿರುದ್ಧದ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಇಲಾಖೆ ಭಾರಿ ದಂಡ ವಿಧಿಸಿದೆ.
ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಣೆ ಮಾಡಿದ ಆರೋಪದ ಪ್ರಕರಣದಲ್ಲಿ ರನ್ಯಾ ರಾವ್ ಅವರಿಗೆ ಬರೋಬ್ಬರಿ ೮೯ ಕೋಟಿ ದಂಡ ವಿಧಿಸಿ ಕಸ್ಟಮ್ಸ್ ಇಲಾಖೆ ಆದೇಶ ಹೊರಡಿಸಿದೆ.
ಕಸ್ಟಮ್ಸ್ ಇಲಾಖೆಯ ಜಂಟಿ ನಿರ್ದೇಶಕ ಸಂದೀಪ್ ಅವರು ಈ ಕುರಿತು ೩೯೯ ಪುಟಗಳ ವಿಸ್ತೃತ ಆದೇಶ ಹೊರಡಿಸಿದ್ದು, ದಂಡದ ಮೊತ್ತವನ್ನು ಪಾವತಿಸುವಂತೆ ರನ್ಯಾ ರಾವ್ ಅವರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ.
೧೧೩ ಕೆಜಿ ಚಿನ್ನ ಸಾಗಣೆ:
ಕಸ್ಟಮ್ಸ್ ತನಿಖೆಯ ಪ್ರಕಾರ, ೨೦೨೪ರ ಮಾರ್ಚ್ ೭ರಿಂದ ೨೦೨೫ರ ಫೆಬ್ರವರಿ ೧೮ರವರೆಗೆ ರನ್ಯಾ ರಾವ್ ಅವರು ಸಹ ಆರೋಪಿಗಳೊಂದಿಗೆ ಸೇರಿ ದುಬೈನಿಂದ ಸುಮಾರು ೧೧೩ ಕೆಜಿ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಣೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ತರುಣ್ ಸೇರಿದಂತೆ ಇತರ ಆರೋಪಿಗಳೊಂದಿಗೆ ಸೇರಿ ಅಕ್ರಮ ಚಿನ್ನದ ವಹಿವಾಟಿನಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ರನ್ಯಾ ರಾವ್ ವಿರುದ್ಧ ಕೇಳಿಬಂದಿದೆ. ಪ್ರಕರಣದ ಪ್ರತಿಯೊಬ್ಬ ಆರೋಪಿಯ ಪಾತ್ರ ಹಾಗೂ ಅಕ್ರಮ ವಹಿವಾಟಿನ ಪ್ರಮಾಣವನ್ನು ಆಧರಿಸಿ ಕಸ್ಟಮ್ಸ್ ಇಲಾಖೆ ದಂಡ ವಿಧಿಸಿದೆ.
ಕಸ್ಟಮ್ಸ್ ಕಾಯ್ದೆಯಡಿ ಈ ದಂಡದ ಆದೇಶ ಹೊರಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ೩೯೯ ಪುಟಗಳ ವಿಸ್ತೃತ ವರದಿಯನ್ನು ಸಿದ್ಧಪಡಿಸಲಾಗಿದೆ.
ಮಾರ್ಚ್ ೨೦೨೫ರಲ್ಲಿ ಬಂಧನ:
ದುಬೈನಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ೨೦೨೫ರ ಮಾರ್ಚ್ ೩ರಂದು ಆಗಮಿಸಿದ್ದ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದ್ದರು. ಈ ವೇಳೆ ಅವರ ಬಳಿ ೧೪.೨೧೩ ಕೆಜಿ ಚಿನ್ನ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.
ಬಂಧನದ ಬಳಿಕ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಈ ನಡುವೆ ಹೈಕೋರ್ಟ್‌ನ ಏಕಸದಸ್ಯ ಪೀಠವು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
ಮುನ್ನೆಚ್ಚರಿಕೆ ಬಂಧನ:
ಚಿನ್ನದ ಅಕ್ರಮ ಸಾಗಣೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ (ಸಿಇಐಬಿ) ರನ್ಯಾ ರಾವ್ ವಿರುದ್ಧ ಕಾಫಿಪೋಸಾ ಕಾಯ್ದೆಯ ಸೆಕ್ಷನ್ ೩(೧) ಅಡಿ ಮುನ್ನೆಚ್ಚರಿಕೆ ಬಂಧನದ ಆದೇಶ ಹೊರಡಿಸಿತ್ತು.
ತನಿಖೆ ಮುಂದುವರಿದಂತೆ, ರನ್ಯಾ ರಾವ್ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಅಕ್ರಮ ಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳು ಬೆಳಕಿಗೆ ಬಂದಿದ್ದವು.
ನಂತರ ೨೦೨೬ರ ಏಪ್ರಿಲ್ ೨೨ರಂದು ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ರನ್ಯಾ ರಾವ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದೀಗ ಪ್ರಕರಣದಲ್ಲಿ ಕಸ್ಟಮ್ಸ್ ಇಲಾಖೆ ೮೯ ಕೋಟಿ ದಂಡ ವಿಧಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಪ್ರಕರಣದ ಹಿನ್ನಲೆ:
ನಟಿ ರನ್ಯಾ ರಾವ್, ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ಬಳಿಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಪ್ರತಿಷ್ಠಿತ ಡಾಲರ್ಸ್ ಕಾಲೋನಿಯಲ್ಲಿ ವಾಸವಿದ್ದ ರನ್ಯಾ ರಾವ್ ಉದ್ಯಮ ಮತ್ತು ಬ್ಯುಸಿನೆಸ್ ನೆಪ ಒಡ್ಡಿ ದುಬೈಗೆ ಸಾಗುತ್ತಿದ್ದ ನಟಿ ರನ್ಯಾ ರಾವ್ ಅವರ ಮೇಲಿದ್ದ ಅನುಮಾನದಿಂದಾಗಿ ಕಸ್ಟಮ್ಸ್ ಹಾಗೂ ಡಿಆರ್‌ಐ ಅಧಿಕಾರಿಗಳು ಅವರ ಚಲನವಲನಗಳ ಮೇಲೆ ನಿರಂತರ ನಿಗಾ ಇರಿಸಿದ್ದರು, ೨೦೨೫ರ ಮಾರ್ಚ್ ೩ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ತಡೆದು ತೀವ್ರ ತಪಾಸಣೆ ನಡೆಸಿದ್ದರು. ಈ ವೇಳೆ ಅವರ ಬಳಿ ೧೪.೨೧೩ ಕೆಜಿ ಅಕ್ರಮ ಚಿನ್ನ ಪತ್ತೆಯಾಗಿದ್ದು, ತಕ್ಷಣವೇ ಅವರನ್ನು ಬಂಧಿಸಲಾಯಿತು. ಬಂಧನದ ಬಳಿಕ ರನ್ಯಾ ರಾವ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತಳ್ಳಲಾಯಿತು. ಈ ಮಧ್ಯೆ ಹೈಕೋರ್ಟ್ ಏಕಸದಸ್ಯ ಪೀಠವು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.
ಒಂದು ವರ್ಷ ಜೈಲು:
ಚಿನ್ನದ ಅಕ್ರಮ ಸಾಗಾಣಿಕೆಯ ಗಂಭೀರತೆಯನ್ನು ಪರಿಗಣಿಸಿ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ ರನ್ಯಾ ರಾವ್ ವಿರುದ್ಧ ಕಾಫಿಪೋಸಾ ಕಾಯ್ದೆ ಸೆಕ್ಷನ್ ೩(೧) ಅಡಿ ಮುನ್ನೆಚ್ಚರಿಕೆ ಬಂಧನದ ಆದೇಶ ಹೊರಡಿಸಿತು. ಪರಿಣಾಮವಾಗಿ ಅವರಿಗೆ ಬರೋಬ್ಬರಿ ಒಂದು ವರ್ಷದವರೆಗೆ ಜಾಮೀನು ಸಿಗದೆ ಜೈಲಿನಲ್ಲೇ ಉಳಿಯುವಂತಾಯಿತು. ತನಿಖೆ ಮುಂದುವರಿದಂತೆ, ನಟಿ ರನ್ಯಾ ರಾವ್ ಒಟ್ಟಾರೆಯಾಗಿ ೧೦೨ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರಿ ಪ್ರಮಾಣದ ಚಿನ್ನವನ್ನು ಸಾಗಾಟ ಮಾಡಿರುವ ಬೃಹತ್ ಜಾಲದ ಆಘಾತಕಾರಿ ಸತ್ಯಗಳು ಒಂದೊಂದಾಗಿ ಹೊರಬಿದ್ದವು. ನಂತರದಲ್ಲಿ ಏಪ್ರಿಲ್ ೨೨ ೨೦೨೬ರಂದು ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ನೀಡಿತ್ತು. ಇದೀಗ ಭಾರೀ ಪ್ರಮಾಣ ಕಸ್ಟಮ್ಸ್ ಇಲಾಖೆ ದಂಡ ವಿಧಿಸಿದೆ.
ನಾಲ್ವರಿಗೆ ೨೪೪ ಕೋಟಿ ದಂಡ:
ರನ್ಯಾ ರಾವ್ ಸೇರಿದಂತೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಒಟ್ಟಾರೆಯಾಗಿ ೨೪೪ ಕೋಟಿಗೂ ಅಧಿಕ ದಂಡ ವಿಧಿಸಲಾಗಿದೆ.
ತರುಣ್ ಕೊಂಡಾರು ರಾಜು: ೪೯,೫೧,೬೫,೨೩೦ (ಸುಮಾರು ೪೯.೫೧ ಕೋಟಿ)
ಸಾಹಿಲ್ ಜೈನ್: ೫೩,೦೬,೬೦,೪೩೦ (ಸುಮಾರು ೫೩.೦೬ ಕೋಟಿ)
ಭರತ್ ಕುಮಾರ್ ಜೈನ್: ೫೩,೦೬,೬೦,೪೩೦ (ಸುಮಾರು ೫೩.೦೬ ಕೋಟಿ)
ನಟಿ ರನ್ಯಾ ರಾವ್: ೮೯,೦೦,೦೦,೦೦೦ (೮೯ ಕೋಟಿ)
ಸಂಪೂರ್ಣ ಮಾಹಿತಿ ಲಭ್ಯವಿಲ್ಲ: ಪ್ರಿಯಾಂಕ್
ನಟಿ ರನ್ಯಾ ರಾವ್ ಪ್ರಕರಣದಲ್ಲಿ ೮೯ ಕೋಟಿ ದಂಡ ಪಾವತಿಸಬೇಕು ಎಂಬ ಆದೇಶದ ಕುರಿತು ಸಂಪೂರ್ಣ ಮಾಹಿತಿ ತಮ್ಮ ಬಳಿ ಇನ್ನೂ ಬಂದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರನ್ಯಾ ರಾವ್ ಪ್ರಕರಣದಲ್ಲಿ ೮೯ ಕೋಟಿ ದಂಡ ಕಟ್ಟಬೇಕು ಎಂಬ ಆದೇಶದ ಸಂಪೂರ್ಣ ಮಾಹಿತಿ ನನ್ನ ಬಳಿ ಇನ್ನೂ ಬಂದಿಲ್ಲ. ಅದರ ಕಾರಣಗಳೇನು, ಹೇಗೆ ಮತ್ತು ಏಕೆ ಈ ಆದೇಶ ಬಂದಿದೆ ಎಂಬುದನ್ನು ಅಧಿಕೃತ ದಾಖಲೆಗಳನ್ನು ನೋಡಿದ ಬಳಿಕವೇ ಹೇಳಲು ಸಾಧ್ಯ” ಎಂದು ಸ್ಪಷ್ಟಪಡಿಸಿದರು.

























