
ಬೆಂಗಳೂರು, ಸೆ. ೩೦- ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಈಗ ಯಾತ್ರೆಗಳ ಭರಾಟೆ.
ಕಾಂಗ್ರೆಸ್ ಪಕ್ಷ ಇಂದಿನಿಂದ ಭಾರತ್ ಜೋಡೋ-೨ ಯಾತ್ರೆ ಆರಂಭಿಸಿದ್ದರೇ, ಬಿಜೆಪಿ ನಾಳೆಯಿಂದ ಸೇವಾ ಸಂಕಲ್ಪ-ವಿಜಯ ಸಂಕಲ್ಪ ಯಾತ್ರೆಯನ್ನು ಸಂಘಟಿಸಿದೆ.
ಮುಂಬರುವ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಈ ಎರಡೂ ಪಕ್ಷಗಳು ಈಗ ಯಾತ್ರಾ ರಾಜಕಾರಣಕ್ಕೆ ನಾಂದಿ ಹಾಡಿವೆ.
ಈ ಯಾತ್ರೆಗಳ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸುವ ಜತೆಗೆ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಗುರಿ ಹಾಕಿಕೊಂಡಿವೆ.
ಶಿಕಾರಿಪುರದಿಂದ ಭಾರತ್ ಜೋಡೋ-೨ ಆರಂಭ
ಕಾಂಗ್ರೆಸ್ ಪಕ್ಷ ಇಂದಿನಿಂದ ಭಾರತ್ ಜೋಡೋ ಯಾತ್ರೆ-೨ ನ್ನು ಆರಂಭಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ವ ಕ್ಷೇತ್ರವಾದ ಶಿಕಾರಿಪುರದಿಂದಲೇ ಈ ಯಾತ್ರೆ ಆರಂಭಗೊಂಡಿದೆ.
ಕಾಂಗ್ರೆಸ್ ವರಿಷ್ಠ ರಾಹುಲ್ಗಾಂಧಿ ಅವರು ೨೦೨೨ರ ಸೆಪ್ಟೆಂಬರ್ ೭ ರಂದು ಕನ್ಯಾಕುಮಾರಿಯಿಂದ ಭಾರತ್ ಜೋಡೋ ಪಾದಯಾತ್ರೆ ಆರಂಭಿಸಿದ್ದರು. ಈ ಪಾದಯಾತ್ರೆ ಕರ್ನಾಟಕವನ್ನು ೨೦೨೨ ಸೆಪ್ಟೆಂಬರ್ ೩೦ ರಂದು ಗುಂಡ್ಲುಪೇಟೆ ಮೂಲಕ ಪ್ರವೇಶಿಸಿತ್ತು. ಇದೇ ನೆನಪಿನಲ್ಲಿ ಪ್ರದೇಶ ಕಾಂಗ್ರೆಸ್ ಈಗ ಭಾರತ್ ಜೋಡೋ-೨ ಯಾತ್ರೆಯನ್ನು ಆರಂಭಿಸಿದೆ.
ರಾಹುಲ್ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡಿದ್ದ ೧೧ ಜಿಲ್ಲೆಗಳನ್ನು ಹೊರತುಪಡಿಸಿ ೨೯ ಜಿಲ್ಲೆಗಳಲ್ಲಿ ಈ ಯಾತ್ರೆ ನಡೆಯುತ್ತಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವ ೮೪ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದೆ.
ಶಿಕಾರಿಪುರದಲ್ಲಿಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಭಾರತ್ ಜೋಡೋ-೨ ಯಾತ್ರೆ ಆರಂಭವಾಗಿದ್ದು, ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಬಸಂತಪ್ಪ, ಮಧು ಬಂಗಾರಪ್ಪ, ಸೇರಿದಂತೆ ಹಲವು ನಾಯಕರು ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು, ಮುಖಂಡರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಭಾರತ್ ಜೋಡೋ-೨ ಯಾತ್ರೆ ೮೪ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದ್ದು, ೧೦ ಕಿ.ಮಿ. ಪಾದಯಾತ್ರೆ ಹಾಗೂ ಸಮಾವೇಶವನ್ನು ಕಾಂಗ್ರೆಸ್ ನಡೆಸಲಿದೆ. ಒಟ್ಟು ೮೪ ಕ್ಷೇತ್ರಗಳಲ್ಲಿ ೮೪ ದಿನ ಈ ಪಾದಯಾತ್ರೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ನಾಳೆ ಬಿಜೆಪಿಯಿಂದ ಸೇವಾ ಸಕಂಲ್ಪ- ವಿಜಯ ಸಂಕಲ್ಪ ಯಾತ್ರೆ
ಪ್ರಧಾನಿ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ ಸಾರ್ಥಕ ೨೫ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಳೆಯಿಂದ ಎಲ್ಲ ವಿಧಾನಸಭಾ ಕ್ಷೇತ್ರಗಲ್ಲಿ ಸೇವಾ ಸಂಕಲ್ಪ ಅಭಿಯಾನ ಹಾಗೆಯೇ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ವಿಜಯಸಂಕಲ್ಪ ಯಾತ್ರೆಯನ್ನು ಒಟ್ಟೊಟ್ಟಿಗೆ ನಡೆಸಲಿದೆ.
ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರ ಮನೆ ಮನೆಗೆ ತಲುಪಿಸಲು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಈ ವಿಜಯ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ.
ನಾಳೆ ಕೋಲಾರ ಜಿಲ್ಲೆಯ ಕುರುಡುಮಲೆಯ ಗಣೇಶ ದೇವಾಲಯದಿಂದ ಈ ಯಾತ್ರೆಗೆ ಬಿಜೆಪಿ ಚಾಲನೆ ನೀಡಲಿದೆ.
ರಾಜ್ಯದಲ್ಲಿನ ಭ್ರಷ್ಟ, ದುಷ್ಟ,ರೈತ, ಬಡವರ, ಮಹಿಳಾ ವಿರೋಧ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ವಿಜಯ ಸಂಕಲ್ಪ ಯಾತ್ರೆಯನ್ನು ಬಿಜೆಪಿ ಹಮ್ಮಿಕೊಂಡಿದೆ.
ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸೇವಾ ಸಂಕಲ್ಪ ಅಭಿಯಾನದಡಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರದಂತಹ ಕಾರ್ಯಕ್ರಮಗಳ ಜತೆಗೆ ರೈತರು, ಮಹಿಳೆಯರು, ಕಾರ್ಮಿಕರ ಜತೆ ಸಂವಾದ ಕಾರ್ಯಕ್ರಮ ಹಮ್ಮಿಕೊ೧ಳ್ಳಲಾಗಿದೆ. ಹಾಗೆಯೇ ಪ್ರತಿ ಬೂತ್ ಮಟ್ಟದಲ್ಲಿ ಪ್ರಮುಖ ಮುಖಂಡರುಗಳ ಸಭೆ, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಬಿಜೆಪಿ ನಡೆಸುತ್ತಿದೆ.
ಬಿಜೆಪಿಯ ಈ ಸೇವಾ ಸಂಕಲ್ಪ ವಿಜ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮ, ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಸೇರಿದಂತೆ ಪಕ್ಷದ ಎಲ್ಲ ಮುಖಂಡರು, ಶಾಸಕರು, ಸಂಸದರುಗಳು ಪಾಲ್ಗೊಳ್ಳುವರು.























