
ಬೆಂಗಳೂರು, ಅ.೧: ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ೫೯೨೭ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟದ ವಿವರವನ್ನು ಸಮರೋಪಾದಿಯಲ್ಲಿ ಸಂಗ್ರಹಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿಂದು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿದೆ. ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಹೀಗಾಗಿ ಮುಂದಿನ ಮುಂಗಾರಿನವರೆಗೆ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಅಂದಾಜಿಸಿ, ಸಮರ್ಪಕ ಯೋಜನೆ ರೂಪಿಸಿ ಎಂದು ನಿರ್ದೇಶನ ನೀಡಿದರು.
ಪ್ರಸ್ತುತ ಎಷ್ಟು ಗ್ರಾಮಗಳಿಗೆ ಕೊಳವೆ ಬಾವಿ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ಎಷ್ಟು ಕೊಳವೆ ಬಾವಿಗಳು ಬತ್ತಿಹೋಗುವ ಸಾಧ್ಯತೆ ಇದೆ. ಇಲ್ಲಿ ಪರ್ಯಾಯ ಜಲ ಮೂಲವೇನು. ಮೇಲ್ಮೈ ನೀರಿನ ಲಭ್ಯತೆ ಇದ್ದಲ್ಲಿ ಅಥವಾ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದರೆ ಜಲ ಪೂರೈಕೆಗೆ ಎಷ್ಟು ಟ್ಯಾಂಕರ್ ಗಳನ್ನು ಬಾಡಿಗೆಗೆ ಪಡೆಯಬೇಕಾಗುತ್ತದೆ ಎಂಬ ಸಂಪೂರ್ಣ ಯೋಜನೆ ರೂಪಿಸುವಂತೆ ತಿಳಿಸಿದರು.
ಅಂತರ್ಜಲ ಹಾಗೂ ಮೇಲ್ಮೈ ಜಲ ಎರಡೂ ಲಭ್ಯವಿಲ್ಲದಂತಹ ಸೂಕ್ಷ್ಮ ಪ್ರದೇಶಗಳಿಗೆ ಸಮೀಪದಲ್ಲಿ ಎಲ್ಲಿ ನೀರಿನ ಲಭ್ಯತೆ ಇದೆ. ಅದನ್ನು ಗ್ರಾಮಗಳಿಗೆ ಪೂರೈಸಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಈಗಿನಿಂದಲೇ ಯೋಜನೆ ರೂಪಿಸುವಂತೆ ತಿಳಿಸಿದರು.
ಹಿತಮಿತವಾಗಿ ನೀರು ಬಳಸಲು ಜಾಗೃತಿ ಮೂಡಿಸಿ:
ರಾಜ್ಯದ ಬಹುತೇಕ ಕಡೆ ಮಳೆಯ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಗ್ರಾಮೀಣ ಜನರಿಗೆ, ಕೈಗಾರಿಕೆ, ಶಾಲೆ, ಕಾಲೇಜು, ವಿವಿಧ ಸಂಸ್ಥೆಗಳಿಗೆ ಹಿತಮಿತವಾಗಿ ನೀರು ಬಳಸುವಂತೆ ಜಾಗೃತಿ ಮೂಡಿಸಲು ಈಶ್ವರ ಖಂಡ್ರೆ ಸೂಚಿಸಿದರು.

























