
ನವದೆಹಲಿ.ಅ೧: ದುಬೈ-ಟೆಲ್ ಅವೀವ್ ಮಾರ್ಗದ ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್‌ನೊಂದಿಗೆ ನಡೆದ ಭೀಕರ ಸಂಘರ್ಷದ ಬಳಿಕ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹೆಸರು ಜಾಗತಿಕವಾಗಿ ಸುದ್ದಿಯಾಗಿದೆ. ಈ ಘಟನೆಗೂ ಸುಮಾರು ಒಂದು ವರ್ಷ ಮುನ್ನ ಅವರು ನೀಡಿದ್ದ ಪಾಡ್‌ಕಾಸ್ಟ್ ಸಂದರ್ಶನವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
೨೦೨೫ರ ಅಕ್ಟೋಬರ್‌ನಲ್ಲಿ ಪ್ರಸಾರವಾದ ‘ಬೊನಾಫೈಡ್ ಬಾಂಟರ್ ವಿತ್ ಝಲಕ್ ಮೆಹ್ತಾ’ ಪಾಡ್‌ಕಾಸ್ಟ್‌ನಲ್ಲಿ ಮಚ್ಚರ್, ವಿಮಾನ ಹಾರಾಟದ ವೇಳೆ ತುರ್ತು ಪರಿಸ್ಥಿತಿ ಎದುರಾದಾಗ ತರಬೇತಿ ಪಡೆದ ಸಿಬ್ಬಂದಿಯ ಮಹತ್ವದ ಬಗ್ಗೆ ಮಾತನಾಡಿದ್ದರು.‘ಆಕಾಶದಲ್ಲಿ ಏನಾದರೂ ಸಂಭವಿಸಿದರೆ ನಿಮ್ಮನ್ನು ಯಾರು ರಕ್ಷಿಸುತ್ತಾರೆ‘ನಾವು ಆಕಾಶದಲ್ಲಿರುವಾಗ ಏನಾದರೂ ಸಂಭವಿಸಿದರೆ ನಿಮ್ಮನ್ನು ಯಾರು ರಕ್ಷಿಸುತ್ತಾರೆ?” ಎಂದು ಅವರು ಪ್ರಶ್ನಿಸಿದ್ದರು. ವಿಮಾನದಲ್ಲಿರುವ ಪ್ರಯಾಣಿಕರಿಗೆ ವೈದ್ಯರೊಬ್ಬರು ಸಿಕ್ಕರೆ ಅದೃಷ್ಟ. ಆದರೆ ವೈದ್ಯರಿಲ್ಲದ ಸಂದರ್ಭದಲ್ಲೂ ತರಬೇತಿ ಪಡೆದ ಕ್ಯಾಬಿನ್ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರ ಜೀವ ಉಳಿಸಲು ನೆರವಾಗಬಲ್ಲರು ಎಂದು ಅವರು ವಿವರಿಸಿದ್ದರು.
“ಅವರು ಶಸ್ತ್ರಚಿಕಿತ್ಸೆ ಮಾಡುವಷ್ಟು ತರಬೇತಿ ಪಡೆದಿದ್ದಾರೆ ಎಂದು ಹೇಳುವುದಿಲ್ಲ. ಆದರೆ ಅಗತ್ಯ ಸಂದರ್ಭದಲ್ಲಿ ಅವರು ನಿಮ್ಮ ಜೀವ ಉಳಿಸಲು ನೆರವಾಗಬಹುದು. ಪರಿಸ್ಥಿತಿ ಹದಗೆಟ್ಟಾಗ ಸಿಬ್ಬಂದಿಯ ಅಗತ್ಯ ಬಹಳ ಮುಖ್ಯ” ಎಂದು ಮಚ್ಚರ್ ಹೇಳಿದ್ದರು.
ವಿಮಾನ ಹಾರಾಟದ ವೇಳೆ ಪೈಲಟ್‌ಗಳು ಏಕೆ ಹೆಚ್ಚು ಮಾತನಾಡುವುದಿಲ್ಲ ಎಂಬುದನ್ನೂ ಅವರು ಸಂದರ್ಶನದಲ್ಲಿ ವಿವರಿಸಿದ್ದರು. ಕಾಕ್‌ಪಿಟ್‌ನಲ್ಲಿ ಗಂಭೀರ ಚರ್ಚೆ ಆರಂಭವಾದರೆ ಗಮನ ಬೇರೆಡೆಗೆ ಹರಿಯುವ ಸಾಧ್ಯತೆ ಇರುವುದರಿಂದ ಪೈಲಟ್‌ಗಳು ಅನಗತ್ಯ ಮಾತುಕತೆ ತಪ್ಪಿಸುತ್ತಾರೆ ಎಂದಿದ್ದರು.
ತೀವ್ರ ಹವಾಮಾನ, ಗುಡುಗು-ಮಿಂಚು ಹಾಗೂ ಭಾರಿ ಪ್ರಕ್ಷುಬ್ಧತೆ ಎದುರಾದಾಗ ಪೈಲಟ್‌ಗಳು ಸಂಪೂರ್ಣವಾಗಿ ಕಾರ್ಯಾಚರಣೆಯತ್ತ ಗಮನ ಕೇಂದ್ರೀಕರಿಸುವ ‘ಸ್ವಿಚ್-ಆನ್’ ಸ್ಥಿತಿಗೆ ಹೋಗುತ್ತಾರೆ ಎಂದಿದ್ದರು.“ನಾವು ಮಾತನಾಡುವುದಿಲ್ಲ ಎಂದರೆ ನಾವು ಹೆದರಿದ್ದೇವೆ ಎಂದರ್ಥವಲ್ಲ” ಎಂಬ ಅವರ ಮಾತು ಇದೀಗ ನಡೆದ ಘಟನೆಯ ಹಿನ್ನೆಲೆಯಲ್ಲಿ ಮತ್ತಷ್ಟು ಗಮನ ಸೆಳೆದಿದೆ.
ಲಭ್ಯವಿರುವ ಅವರ ವೃತ್ತಿಪರ ಮಾಹಿತಿಯ ಪ್ರಕಾರ, ಸ್ಮಿತ್ ಮಚ್ಚರ್ ಅವರಿಗೆ ೧೩ ವರ್ಷಕ್ಕೂ ಹೆಚ್ಚು ವಾಣಿಜ್ಯ ವಿಮಾನ ಹಾರಾಟದ ಅನುಭವವಿದೆ. ಬೋಯಿಂಗ್-೭೩೭ ವಿಮಾನದಲ್ಲಿ ೯,೭೫೦ಕ್ಕೂ ಅಧಿಕ ಹಾರಾಟ ಗಂಟೆಗಳ ಅನುಭವ ಹೊಂದಿದ್ದಾರೆ ಎನ್ನಲಾಗಿದೆ.
೨೦೧೧ರಲ್ಲಿ ಸ್ಪೈಸ್‌ಜೆಟ್‌ಗೆ ಸೇರಿದ ಅವರು ಲೈನ್ ಟ್ರೈನಿಂಗ್ ಕ್ಯಾಪ್ಟನ್ ಹಾಗೂ ಸೀನಿಯರ್ ಕಮಾಂಡರ್ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ೨೦೨೨ರ ಜೂನ್‌ನಲ್ಲಿ ಫ್ಲೈದುಬೈಗೆ ಡೈರೆಕ್ಟ್ ಎಂಟ್ರಿ ಕ್ಯಾಪ್ಟನ್ ಆಗಿ ಸೇರ್ಪಡೆಯಾಗಿದ್ದರು.
೧೭ ಸಾವಿರ ಅಡಿಗೂ ಹೆಚ್ಚು ಕುಸಿದ ವಿಮಾನ
ಫ್ಲೈದುಬೈಯ ಈZ೧೦೭೩ ವಿಮಾನ ಬುಧವಾರ ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದಾಗ ಕಾಕ್‌ಪಿಟ್‌ನಲ್ಲಿ ತುರ್ತು ಪರಿಸ್ಥಿತಿ ಎದುರಿಸಿತು. ೩೪,೦೦೦ ಅಡಿ ಎತ್ತರದಲ್ಲಿದ್ದ ವಿಮಾನ ಕೆಲವೇ ಸಮಯದಲ್ಲಿ ೧೭,೦೦೦ ಅಡಿಗೂ ಹೆಚ್ಚು ಕೆಳಗೆ ಇಳಿಯಿತು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ವಿಮಾನದಲ್ಲಿ ೧೭೪ ಪ್ರಯಾಣಿಕರು, ಅವರಲ್ಲಿ ೨೭ ಮಕ್ಕಳು ಇದ್ದರು ಎನ್ನಲಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಸ್ಮಿತ್ ಮಚ್ಚರ್ ರಕ್ತಸಿಕ್ತ ಸ್ಥಿತಿಯಲ್ಲಿ ಆಮ್ಲಜನಕದ ಮಾಸ್ಕ್ ಧರಿಸಿ ವಿಮಾನದ ಗ್ಯಾಲಿಯಲ್ಲಿ ಮಲಗಿರುವುದು ಕಂಡುಬಂದಿದೆ.
ವರದಿಗಳ ಪ್ರಕಾರ, ಸಹ ಪೈಲಟ್‌ನೊಂದಿಗೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಮಚ್ಚರ್ ಗಂಭೀರವಾಗಿ ಗಾಯಗೊಂಡರೂ ವಿಮಾನದ ನಿಯಂತ್ರಣ ಹಾಗೂ ಪ್ರಯಾಣಿಕರ ಸುರಕ್ಷತೆಯ ಕಾರ್ಯದಲ್ಲಿ ನೆರವಾಗಿದ್ದರು.

























