
ಬೆಂಗಳೂರು, ಅ.೧ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನಿನ್ನೆ ಭಾರತ್ ಜೋಡೋ-೨ ಯಾತ್ರೆ ಆರಂಭಿಸಿದ ಬೆನ್ನಲ್ಲೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಇಂದು ಆರಂಭಗೊಂಡಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೂತ್ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು.
ದೇಶಾದ್ಯಂತ ಬಿಜೆಪಿ ನಡೆಸಿರುವ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಬೂತ್ ವಿಜಯ ಸಂಕಲ್ಪ ಯಾತ್ರೆಯನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ
ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪದೊಂದಿಗೆ ಈ ಯಾತ್ರೆಗೆ ಚಾಲನೆ ನೀಡಲಾಗಿದೆ
ಕುರುಡಮಲೈ ವಿಘ್ನೇಶ್ವರ ದೇವಸ್ಥಾನದಿಂದ ಆರಂಭವಾದ ಯಾತ್ರೆ ಬಂಗಾರಪೇಟೆ ಹಾಗೂ ಕೆಜಿಎಫ್ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಂಗೌಡ, ನಂದೀಶ್‌ರೆಡ್ಡಿ, ರಾಜ್ಯ ಕಾರ್ಯದರ್ಶಿಗಳಾದ ರಮೇಶ್‌ಗೌಡ, ಅಂಬಿಕಾ ಹುಲಿನಾಯ್ಕರ್, ಕೋಲಾರ ಜಿಲ್ಲಾಧ್ಯಕ್ಷರಾದ ಓಂಶಕ್ತಿ ಚಲಪತಿ, ಮಾಜಿ ಸಂಸದ ಎಸ್. ಮುನಿಸ್ವಾಮಿ, ಮಾಜಿ ಶಾಸಕರಾಜ ವೈ. ಸಂಪಂಗಿ, ಬಿ.ಪಿ. ವೆಂಕಟಮುನಿಯಪ್ಪ, ಕೆ.ಎಸ್. ಮಂಜುನಾಥ್‌ಗೌಡ, ವರ್ತೂರು ಪ್ರಕಾಶ್, ವೈ.ಎ. ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಈ ಯಾತ್ರೆಯಲ್ಲಿ ಭಾಗಿಯಾದರು
ಕೈ ವಿರುದ್ಧ ವಾಗ್ದಾಳಿ
ಹತಾಶರಾದ ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೂ ಅನುಮಾನ ಹುಟ್ಟು ಹಾಕುವ ದುಸ್ಸಾಹಸಕ್ಕೆ ಕೈಹಾಕುತ್ತಿದ್ದಾರೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಬೂತ್ ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ಮುಳಬಾಗಿಲು ತಾಲೂಕಿನ ಕುರುಡುಮಲೆ ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರಮುಖರು ಪೂಜೆಯಲ್ಲಿ ಭಾಗವಹಿಸಿದ್ದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಾಂಗ್ರೆಸ್ಸಿನವರ ಕಪಟ ನಾಟಕವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಹತಾಶರಾದ ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ನರೇಂದ್ರ ಮೋದಿಯವರ ಯೋಜನೆಗಳು, ದೇಶದ ಮುನ್ನಡೆಸುವಿಕೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ; ಮೋದಿ ಜೀಯವರ ಜನಪ್ರಿಯತೆಯನ್ನೂ ಇವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂಥ ಭೀಕರ ಬರಗಾಲದ ಸಂದರ್ಭದಲ್ಲಿ ಹೆಕ್ಟೇರಿಗೆ ೫೦ ಸಾವಿರ ಪರಿಹಾರಧನ ಕೊಡಿ ಎಂದು ನಾವು ಕೇಳಿದರೆ, ಅದನ್ನೂ ಕೊಡಲು ಸಾಧ್ಯವಾಗಿಲ್ಲ. ಕೇವಲ ೨,೫೦೦ ರೂ. ಭಿಕ್ಷೆ ಕೊಟ್ಟಂತೆ ಕೊಟ್ಟಿದ್ದಾರೆ ಎಂದು ಟೀಕಿಸಿದರು. ರಾಜ್ಯ ಸರಕಾರವು ರೈತರ ಪಾಲಿಗೆ ಬದುಕಿದ್ದೂ ಸತ್ತಂತಿದೆ ಎಂದು ದೂರಿದರು.
ಬರೆ ಎಳೆಯುವ ಕೆಲಸ..
ಒನ್‌ವೇನಲ್ಲಿ ವಾಹನ ಹೋದರೆ ೫ ಸಾವಿರ ದಂಡ ವಿಧಿಸುವುದಾಗಿ ಸಚಿವರು ಹೇಳಿದ್ದಾರೆ. ಕಾನೂನು ಉಲ್ಲಂಘಿಸುವರ ಮೇಲೆ ಕ್ರಮ ಕೈಗೊಳ್ಳಲಿ. ವಸೂಲಾತಿ, ಜನರ ಮೇಲೆ ಬರೆ ಎಳೆಯುವ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಹೊರಟಿದೆ. ಸರಕಾರದ ವಿರುದ್ಧ ಜನರೇ ದಂಗೆ ಏಳುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳಿಗೆ ರಿಯಲ್ ಎಸ್ಟೇಟ್ ಹೊರತುಪಡಿಸಿ ಬೇರೇನೂ ಆದ್ಯತೆ ಇಲ್ಲ ಎಂದು ಟೀಕಿಸಿದರು. ಕಳೆದ ೩ ವರ್ಷದಲ್ಲಿ ೫೫ ಸಾವಿರ ಕೋಟಿ ಎಸ್‌ಇಪಿ, ಟಿಎಸ್‌ಪಿ ಹಣವನ್ನು ಬೇರೆ ಬೇರೆ ಕಾರ್ಯಕ್ರಮಕ್ಕೆ ವರ್ಗಾವಣೆ ಮಾಡಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದರು
ಈ ಜನವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಜನರು ಬುದ್ಧಿ ಕಲಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನರು ಆಶೀರ್ವಾದ ಮಾಡಲಿದ್ದಾರೆ. ಕರ್ನಾಟಕವು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು. ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೊಂದು ಪ್ರಶ್ನಗೆ ಉತ್ತರಿಸಿದ ಅವರು, ಸಚಿವರಿಗೆ ಶೇ ೮ ಕಮಿಷನ್ ಕೊಡಬೇಕಾಗುತ್ತದೆ ಎಂಬ ಬಗ್ಗೆ ಕಾಂಗ್ರೆಸ್ ಶಾಸಕ ಅಶೋಕ್ ರೈ ಪತ್ರ ಬರೆದಿದ್ದಾರೆ. ಭ್ರಷ್ಟಾಚಾರ ಇಲ್ಲದೇ ಕಾಂಗ್ರೆಸ್ ಸರಕಾರದಲ್ಲಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ. ಗೃಹಲಕ್ಷ್ಮಿ ೫ ಸಾವಿರ ಕೋಟಿ ಎಲ್ಲಿ ಹೋಗಿದೆ ಎಂಬುದಕ್ಕೆ ಇವತ್ತಿಗೂ ಉತ್ತರ ಸಿಕ್ಕಿಲ್ಲ ಎಂದು ಗಮನ ಸೆಳೆದರು. ಇದು ಭ್ರಷ್ಟರಿಂದ- ಭ್ರಷ್ಟರ ರಕ್ಷಣೆಗೆ ಇರುವ ಸರಕಾರ ಎಂದು ಟೀಕಿಸಿದರು. ಈ ಭ್ರಷ್ಟರ ಸರಕಾರವನ್ನು ಬುಡಸಮೇತ ಕಿತ್ತುಹಾಕುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ನುಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸುದೀರ್ಘ ೨೫ ವರ್ಷಗಳ ಸಾರ್ವಜನಿಕ ಸೇವೆಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಮೋದಿಜೀ ಅವರಿಗೆ ಭಗವಂತನು ಆರೋಗ್ಯ ಮತ್ತು ಆಯುಸ್ಸನ್ನು ಕೊಟ್ಟು ದೇಶ ಮುನ್ನಡೆಸುವ ಹೆಚ್ಚಿನ ಶಕ್ತಿ ಕೊಡಲೆಂದು ಪ್ರಾರ್ಥಿಸಿ ಪ್ರವಾಸ ಆರಂಭಿಸಿದ್ದೇವೆ. ಬಂಗಾರಪೇಟೆ ಮತ್ತು ಕೆಜಿಎಫ್ ವಿಧಾನಸಭಾ ಕ್ಷೇತ್ರಗಳಲ್ಲಿ ಸೇವಾ ಸಂಕಲ್ಪ ಅಭಿಯಾನ ಮುಂದುವರಿಯಲಿದೆ ಎಂದರು.
ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಅದು ಕಾರ್ಯಕರ್ತರ ಚುನಾವಣೆಯಾಗಿದ್ದು, ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವೂ ಯಾತ್ರೆ ವೇಳೆ ನಡೆಯಲಿದೆ. ಭವಿಷ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರಲು ಕೋಲಾರ ಜಿಲ್ಲೆಯಲ್ಲೂ ಅತಿ ಹೆಚ್ಚು ಬಿಜೆಪಿ ಶಾಸಕರನ್ನು ನಾವು ಗೆಲ್ಲಬೇಕಿದೆ ಎಂದು ತಿಳಿಸಿದರು.

























